ಗದಗ 11: ಜಗತ್ತಿನ ಇತಿಹಾಸದಲ್ಲಿ ಭಾರತೀಯ ಸಂಸ್ಕೃತಿಗೆ ಅತ್ಯುನ್ನತ ಸ್ಥಾನವಿದೆ. ನಮ್ಮ ಹಿರಿಯರು ರೂಪಿಸಿದ ಪ್ರತಿಯೊಂದು ಪದ್ಧತಿಯೂ ಕೇವಲ ಮೂಢನಂಬಿಕೆಯಲ್ಲ, ಅವುಗಳ ಹಿಂದೆ ಅತಿ ದೊಡ್ಡ ವೈಜ್ಞಾನಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ರಹಸ್ಯಗಳಿವೆ. ವಿಶೇಷವಾಗಿ ಸ್ತ್ರೀಯರ ಗೌರವ ಮತ್ತು ಸುರಕ್ಷತೆಗಾಗಿ ರೂಪಿಸಲಾಗಿದ್ದ ಸನಾತನ ಪದ್ಧತಿಗಳನ್ನು ಇಂದಿನ ತಲೆಮಾರು ಆಧುನಿಕತೆಯ ಹೆಸರಿನಲ್ಲಿ ಕಡೆಗಣಿಸುತ್ತಿರುವುದು ಹೆಣ್ಣುಕುಲದ ಅಸ್ಮಿತೆಗೇ ಆತಂಕಕಾರಿಯಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಅವರು ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ನಮ್ಮ ಸನಾತನ ಪರಂಪರೆಯಲ್ಲಿ ಹೆಣ್ಣುಮಕ್ಕಳು ಮೈತುಂಬ ಸೀರೆ ಉಟ್ಟು, ಉಡುಪಿನ ಸೌಮ್ಯತೆಯನ್ನು ಕಾಪಾಡಿಕೊಳ್ಳುತ್ತಿದ್ದರು. ಹಣೆಯ ಮಧ್ಯಭಾಗದಲ್ಲಿ (ಆಜ್ಞಾ ಚಕ್ರದ ಸ್ಥಾನದಲ್ಲಿ) ಜ್ಞಾನ ಮತ್ತು ಸೌಭಾಗ್ಯದ ಸಂಕೇತವಾದ ಕುಂಕುಮವಿಟ್ಟು, ಕೈಯಲ್ಲಿ ಧನಾತ್ಮಕ ಶಕ್ತಿ ಹಾಗೂ ರಕ್ತಪರಿಚಲನೆಯನ್ನು ನಿಯಂತ್ರಿಸುವ ಬಳೆಗಳನ್ನು ಧರಿಸಿ, ಕಾಲಿನಲ್ಲಿ ಬೆಳ್ಳಿಯ ಗೆಜ್ಜೆ ಅಥವಾ ಚೈನ್ ತೊಟ್ಟು, ತಲೆಯ ಮೇಲೆ ಶರಗನ್ನು ಹಾಕಿಕೊಂಡು ಬರುತ್ತಿದ್ದರೆ, ಅವರನ್ನು ನೋಡುವ ಇಡೀ ಜಗತ್ತೇ ಅತ್ಯಂತ ಗೌರವದಿಂದ ಕೈಮುಗಿಯುತ್ತಿತ್ತು
. ಈ ಪಂಚ ಮುತ್ತೈದೆ ವಸ್ತುಗಳು ಮಹಿಳೆಗೆ ಕೇವಲ ಬಾಹ್ಯ ಸೌಂದರ್ಯವನ್ನು ನೀಡುತ್ತಿರಲಿಲ್ಲ, ಬದಲಾಗಿ ಸಮಾಜದಲ್ಲಿ ಅವಳಿಗೊಂದು ಅತ್ಯುನ್ನತ ಸಾಮಾಜಿಕ ಸುರಕ್ಷತಾ ಕವಚ ಮತ್ತು ದಿವ್ಯ ಗೌರವವನ್ನು ತಂದುಕೊಡುತ್ತಿದ್ದವು. ಆದರೆ ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ತೀವ್ರ ಪ್ರಭಾವದಿಂದಾಗಿ ಸುಮಾರು ಶೇ. 70 ಕ್ಕೂ ಹೆಚ್ಚು ಮದುವೆಯಾದ ಮಹಿಳೆಯರು ಸಾಂಪ್ರದಾಯಿಕ ಸೀರೆಯನ್ನು ತ್ಯಜಿಸಿ ಚೂಡಿದಾರ್ ಧರಿಸುತ್ತಿದ್ದಾರೆ
. ಹಣೆಯ ಕುಂಕುಮ ಮಾಯವಾಗಿದೆ, ಕೈಬಳೆಗಳು ಕಳಚಿಬಿದ್ದಿವೆ. ಧರಿಸುವ ಚೂಡಿದಾರ್ಗೆ ಕನಿಷ್ಠ ವೇಲ್ (ದುಪಟ್ಟಾ) ಹಾಕುವುದನ್ನೂ ಮರೆಯುತ್ತಿದ್ದಾರೆ. ಉಡುಗೆ-ತೊಡುಗೆಯ ಈ ಹಠಾತ್ ಬದಲಾವಣೆ ಮತ್ತು ಹಿರಿಯರ ಪದ್ಧತಿಗಳ ಕಡೆಗಣನೆಯಿಂದಾಗಿ, ಸಮಾಜದಲ್ಲಿ ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನ ಕಲುಷಿತಗೊಳ್ಳುತ್ತಿದೆ
. ಪ್ರಸ್ತುತ ದಿನಗಳಲ್ಲಿ ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆ ಬರುತ್ತಿರುವುದಕ್ಕೆ ನಮ್ಮ ಸ್ವಂತ ಸಂಸ್ಕೃತಿಯಿಂದ ನಾವು ದೂರವಾಗುತ್ತಿರುವುದೇ ಮುಖ್ಯ ಕಾರಣ ಎಂದರಲ್ಲದೆ ವಿಕೃತ ಕಣ್ಣುಗಳಿಂದ ಸಮಾಜವನ್ನು ರಕ್ಷಿಸಲು ಹಿರಿಯರು ಕೊಟ್ಟ ಪದ್ಧತಿಗಳನ್ನು ನಾವೇ ಕೈಬಿಡುತ್ತಿರುವುದು ದುರಂತ” ಎಂದು ಕೃಷ್ಣಾ ಅವರು ವಿಷಾದಿಸಿದ್ದಾರೆ.
ಯಾವ ಭಾರತೀಯ ನಾರಿಯರ ಶೀಲ, ಸಂಸ್ಕಾರ ಮತ್ತು ಉದಾತ್ತ ಜೀವನಶೈಲಿಯನ್ನು ಕಂಡು ಇಡೀ ಜಗತ್ತಿನ ಪ್ರಜ್ಞಾವಂತ ಚಿಂತಕರು ಕೊಂಡಾಡಿದ್ದರೋ, ಅದೇ ಜಗತ್ತು ಇಂದು ಭಾರತೀಯರ ಸಾಂಸ್ಕೃತಿಕ ಪಲ್ಲಟವನ್ನು ಕಂಡು ನಿರಾಸೆ ವ್ಯಕ್ತಪಡಿಸುತ್ತಿದೆ. ವೈಜ್ಞಾನಿಕ ಹಿನ್ನೆಲೆಯುಳ್ಳ ನಮ್ಮದೇ ಆಚರಣೆಗಳನ್ನು ಮೂಢನಂಬಿಕೆ ಎಂದು ಮೂಲೆಗುಂಪು ಮಾಡುತ್ತಿರುವುದಕ್ಕೆ ಬುದ್ಧಿಜೀವಿಗಳು ಮತ್ತು ಸಮಾಜದ ಹಿರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೊಸ ಪದ್ಧತಿಗಳು ನಮಗೆ ತಾತ್ಕಾಲಿಕ ಆಧುನಿಕತೆಯನ್ನು ನೀಡಬಹುದು, ಆದರೆ ಎಂದಿಗೂ ಶಾಶ್ವತ ಗೌರವವನ್ನು ತಂದುಕೊಡಲು ಸಾಧ್ಯವಿಲ್ಲ ಎಂಬುದನ್ನು ನಾವಿಂದು ಅರಿಯಬೇಕಿದೆ ಎಂದರು. ಹಿರಿಯರ ಆಶಯದಂತೆ ರೂಢಿಯಲ್ಲಿರುವ ಈ ಪವಿತ್ರ ಪದ್ಧತಿಗಳನ್ನು ಜೀವಂತವಾಗಿಡುವುದು ಇಂದಿನ ತುರ್ತು ಅಗತ್ಯವಾಗಿದೆ. ಹೀಗಾಗಿ, ಗದಗ ಜಿಲ್ಲೆ, ಇಡೀ ಕರ್ನಾಟಕ ಹಾಗೂ ದೇಶದ ಸಮಸ್ತ ಹೆಣ್ಣುಮಕ್ಕಳಲ್ಲಿ ನಾನು ಅತ್ಯಂತ ನಮ್ರತೆಯಿಂದ ತಲೆಬಾಗಿ, ಕೈಮುಗಿದು, ಮನಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ: ದಯಮಾಡಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯಬೇಡಿ.
ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲೇ ನಡೆದು, ಹೆಣ್ಣುಕುಲದ ಸನಾತನ ಗೌರವವನ್ನು ಸದಾ ಕಾಪಾಡಿ, ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಿ” ಎಂದು ಗದಗಿನ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಅವರು ಅತ್ಯಂತ ಭಾವನಾತ್ಮಕವಾಗಿ ಸಮಾಜದ ಪ್ರತಿಯೊಬ್ಬರಿಗೂ ಕರೆ ನೀಡಿ ಮನವಿ ಮಾಡಿದ್ದಾರೆ.
ಕೃಷ್ಣಾ ಎಚ್. ಹಡಪದ ಸಾಮಾಜಿಕ ಕಾರ್ಯಕರ್ತರು, ಗದಗ 9845650612
