ಸರ್ಕಾರಕ್ಕೆ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಮನವಿ
ಗದಗ, ಸೆ.11: ಹಿಂದುಳಿದ ಹಾಗೂ ಬಡ ಸಮುದಾಯಗಳಲ್ಲಿ ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ ಅಂತ್ಯಸಂಸ್ಕಾರದ ಸಾಮಗ್ರಿಗಳನ್ನು ಖರೀದಿಸುವ ‘ಮಾರ್ಕೆಟ್ ಸಂತೆ’ ಹೆಸರಿನಲ್ಲಿ ಬಡ ಕುಟುಂಬಗಳಿಂದ ಒತ್ತಾಯಪೂರ್ವಕವಾಗಿ ಮದ್ಯ ಕೊಡಿಸುವ ಅನಿಷ್ಟ ಪದ್ಧತಿಯನ್ನು ರಾಜ್ಯಾದ್ಯಂತ ತಕ್ಷಣವೇ ನಿಷೇಧಿಸಿ, ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಗದಗಿನ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿರುವ ಅವರು, ಮರಣ ಹೊಂದಿದವರ ಮನೆಯಲ್ಲಿ ದುಃಖ, ಕಣ್ಣೀರು ಹಾಗೂ ಕುಟುಂಬದ ಭವಿಷ್ಯದ ಬಗ್ಗೆ ಆತಂಕದ ವಾತಾವರಣವಿರುತ್ತದೆ. ಇಂತಹ ಸಂದರ್ಭದಲ್ಲಿ ಸಾಂತ್ವನ ಹೇಳಿ ಧೈರ್ಯ ತುಂಬಬೇಕಾದ ಬದಲು, ಕೆಲವರು ‘ಸಂತೆ ಮಾಡಲು ಬಂದವರಿಗೆ ಸಾರಾಯಿ ಕೊಡಿಸಲೇಬೇಕು’ ಎಂದು ಒತ್ತಾಯಿಸುವುದು ಅಮಾನವೀಯ ಮತ್ತು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ಹಣವೇ ಇಲ್ಲದ ಬಡ ಕುಟುಂಬಗಳ ಮೇಲೆ ಮದ್ಯ ವಿತರಿಸುವ ಹೆಚ್ಚುವರಿ ಹೊರೆ ಬೀಳುತ್ತಿದೆ. ಕೆಲ ಕುಟುಂಬಗಳು ಈ ಅನಿಷ್ಟ ಆಚರಣೆಗಾಗಿ ಮೀಟರ್ ಬಡ್ಡಿ, ಕೈಗಡ ಸೇರಿದಂತೆ ವಿವಿಧ ರೀತಿಯ ಸಾಲದ ಸುಳಿಗೆ ಸಿಲುಕುವಂತಾಗಿದೆ.
ಒಂದು ಕಡೆ ಕುಟುಂಬದ ಸದಸ್ಯರನ್ನು ಕಳೆದುಕೊಂಡ ದುಃಖ, ಮತ್ತೊಂದೆಡೆ ಅನಗತ್ಯ ಖರ್ಚಿನಿಂದ ಉಂಟಾಗುವ ಸಾಲದ ಹೊರೆ—ಇದರಿಂದ ಬಡ ಕುಟುಂಬಗಳು ದೀರ್ಘಕಾಲ ಆರ್ಥಿಕ ಸಂಕಷ್ಟ ಎದುರಿಸುವಂತಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.“ಬಡವರ ಕಣ್ಣೀರಿನ ಮೇಲೆ ಮದ್ಯದ ಅಮಲು ಬಯಸುವ ಈ ಕೆಟ್ಟ ಮನಸ್ಥಿತಿಯನ್ನು ಸಮಾಜದಿಂದ ಬೇರುಸಹಿತ ಕಿತ್ತೊಗೆಯಬೇಕಾಗಿದೆ
. ಇಂತಹ ದುಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಕೃಷ್ಣಾ ಎಚ್. ಹಡಪದ ಆಗ್ರಹಿಸಿದ್ದಾರೆ.ಅಂತ್ಯಸಂಸ್ಕಾರದ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಮದ್ಯ ಹಂಚುವುದು, ಕುಡಿಸುವುದು ಹಾಗೂ ಗಲಾಟೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಈ ಅನಿಷ್ಟ ಪದ್ಧತಿಯನ್ನು ತಡೆಯಲು ಸಂಬಂಧಿಸಿದ ಸಮುದಾಯಗಳ ಸಂಘಟನೆಗಳಿಗೂ ಸರ್ಕಾರದಿಂದ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.ಅಲ್ಲದೆ, ನಿಯಮ ಉಲ್ಲಂಘಿಸುವವರ ವಿರುದ್ಧ ಭಾರಿ ದಂಡ ವಿಧಿಸಿ, ಆ ದಂಡದ ಮೊತ್ತವನ್ನು ಮೃತರ ಬಡ ಕುಟುಂಬಗಳ ಆರ್ಥಿಕ ನೆರವಿಗೆ ಬಳಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾವಿನ ಮನೆಯಲ್ಲಿ ಮನುಷ್ಯತ್ವ, ಸಾಂತ್ವನ ಮತ್ತು ಸಹಾಯದ ಮನೋಭಾವ ಇರಬೇಕೇ ಹೊರತು ವ್ಯಸನದ ವಿಕೃತಿ ಇರಬಾರದು. ಬಡ ಕುಟುಂಬಗಳ ಹಕ್ಕು ಮತ್ತು ಗೌರವವನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿಯಮಾವಳಿ ರೂಪಿಸಿ, ಅಗತ್ಯವಿದ್ದಲ್ಲಿ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕು ಎಂದು ಕೃಷ್ಣಾ ಎಚ್. ಹಡಪದ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೃಷ್ಣಾ ಎಚ್. ಹಡಪದ
ಸಾಮಾಜಿಕ ಕಾರ್ಯಕರ್ತರು
ಮೊ.: 9845650612
