ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶ್ರೀ ಸಿದ್ದಾರ್ಥ ಗೋಯಲ್, ಐಪಿಎಸ್ ಅವರ ವಿರುದ್ಧ ಸಲ್ಲಿಸಲಾಗಿರುವ ದೂರಿನ ವಿಚಾರದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ದೂರುವನ್ನು ಸಿಐಡಿ ತನಿಖೆಗೆ ವರ್ಗಾಯಿಸಿರುವ ಕ್ರಮಕ್ಕೆ ದೂರುದಾರರು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಮಾನ್ಯ ಸಿಐಡಿ ಐಜಿಪಿ ಶ್ರೀ ರವಿಕುಮಾರ್ ಅವರು ದಿನಾಂಕ 5-09-2026ರಂದು ಹಾಜರಾಗಿ ಹೆಚ್ಚಿನ ವಿವರಣೆ ನೀಡಿ ತನಿಖೆಗೆ ಸಹಕರಿಸುವಂತೆ ಸೂಚಿಸಿರುವುದಾಗಿ ದೂರುದಾರರು ತಿಳಿಸಿದ್ದಾರೆ.
ಆದರೆ, ಈ ಸಂಬಂಧದ ಪತ್ರವನ್ನು ಅಂಚೆ ಮೂಲಕ 3-09-2026ರಂದು ರವಾನಿಸಲಾಗಿದೆ ಎಂದು ನಮೂದಿಸಲಾಗಿದ್ದು, ಪತ್ರವು 7-09-2026ರಂದು ಓಬಳಾಪುರ ಗ್ರಾಮಕ್ಕೆ ತಲುಪಿದೆ ಎಂದು ಹೇಳಲಾಗಿದೆ.ಇದರಿಂದ ಬೆಂಗಳೂರಿನಿಂದ ಓಬಳಾಪುರ ಗ್ರಾಮಕ್ಕೆ ಪತ್ರ ತಲುಪಲು ತೆಗೆದುಕೊಂಡ ಸಮಯದ ಕುರಿತು ದೂರುದಾರರು ಪ್ರಶ್ನೆ ಎತ್ತಿದ್ದಾರೆ
. ಮತ್ತೊಂದೆಡೆ, ಪತ್ರದೊಳಗೆ 31-08-2026ರ ದಿನಾಂಕ ನಮೂದಿಸಿರುವುದು ಕೂಡ ಗಮನ ಸೆಳೆದಿದ್ದು, ವಿಚಾರಣೆಗೆ ನಿಗದಿಪಡಿಸಲಾಗಿದ್ದ ದಿನಾಂಕ 5-09-2026 ಕಳೆದ ಬಳಿಕ ಪತ್ರ ತಲುಪಿರುವುದರಿಂದ, ಪತ್ರ ರವಾನೆ ಹಾಗೂ ವಿತರಣೆಯ ದಿನಾಂಕಗಳ ಕುರಿತು ಸ್ಪಷ್ಟತೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ದಿನಾಂಕಗಳ ವ್ಯತ್ಯಾಸದ ಹಿನ್ನೆಲೆಯಲ್ಲಿ ಅಂಚೆ ರವಾನೆ ದಾಖಲೆ, ಟ್ರ್ಯಾಕಿಂಗ್ ವಿವರ ಹಾಗೂ ಪತ್ರದ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದರೆ ವಾಸ್ತವಾಂಶ ಇನ್ನಷ್ಟು ಸ್ಪಷ್ಟವಾಗಲಿದೆ. ತನಿಖಾ ಸಂಸ್ಥೆ ಈ ಅಂಶಗಳನ್ನೂ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ನಿರೀಕ್ಷೆಯನ್ನು ದೂರುದಾರರು ವ್ಯಕ್ತಪಡಿಸಿದ್ದಾರೆ.ರಾಜ್ಯದ ಪ್ರಮುಖ ತನಿಖಾ ಸಂಸ್ಥೆಯಾದ ಸಿಐಡಿ ಅಧಿಕಾರಿಗಳು ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಿ, ಲಭ್ಯವಿರುವ ದಾಖಲೆಗಳು ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಬಾಗಲಕೋಟೆ ಜಿಲ್ಲಾ ಎಸ್ಪಿ ಶ್ರೀ ಸಿದ್ದಾರ್ಥ ಗೋಯಲ್, ಐಪಿಎಸ್ ಅವರ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ಸಿಐಡಿ ತನಿಖೆಯಲ್ಲಿ ಯಾವ ಅಂಶಗಳು ಹೊರಬರುತ್ತವೆ ಮತ್ತು ತನಿಖೆಯ ನಂತರ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ
.ಆದರೆ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಆರೋಪವನ್ನು ಅಂತಿಮ ಸತ್ಯವೆಂದು ಪರಿಗಣಿಸದೆ, ಸಂಬಂಧಪಟ್ಟ ಅಧಿಕಾರಿಗಳ ನಿಲುವು ಹಾಗೂ ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳನ್ನು ಗಮನಿಸುವುದು ಮುಖ್ಯವಾಗಿದೆ.
ಕಾನೂನನ್ನು ಗೌರವಿಸೋಣ…ಅನ್ಯಾಯದ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸೋಣ…
