ಗದಗ: ಗದಗ ನಗರಸಭೆಯ 21ನೇ ವಾರ್ಡ್ನಲ್ಲಿ ಹತ್ತಾರು ವರ್ಷಗಳಿಂದ ಸಾರ್ವಜನಿಕರನ್ನು ಕಾಡುತ್ತಿದ್ದ ಸರ್ವಿಸ್ ರಸ್ತೆ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆತಿದೆ. ಗಂಗಿಮಡಿ ರಸ್ತೆಯಿಂದ ಹೊಂಬಳ ಕಡೆಗೆ ತೆರಳುವ ಫ್ಲೈಓವರ್ನ ಎಡಭಾಗದ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಸ್ಥಳೀಯರಲ್ಲಿ ಸಂತಸ ಮೂಡಿಸಿದೆ
.ವರ್ಷಗಳಿಂದ ರಸ್ತೆ ಅಭಿವೃದ್ಧಿಯಾಗದೆ ಧೂಳು, ಕೆಸರು ಹಾಗೂ ಗುಂಡಿಗಳಿಂದ ಕೂಡಿದ್ದ ಈ ಮಾರ್ಗದಲ್ಲಿ ಸಂಚರಿಸುವುದು ಸಾರ್ವಜನಿಕರಿಗೆ ದುಸ್ತರವಾಗಿತ್ತು. ವಿಶೇಷವಾಗಿ ರಾಯಲ್ ನರ್ಸರಿ ಶಾಲೆಯ ಮಕ್ಕಳು, ರೈತರು, ಗಂಗಿಮಡಿ ನಗರ ಹಾಗೂ ರೆಹಮತ್ ನಗರದ ನಿವಾಸಿಗಳು ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದರು.
ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ತೆರಳುವ ಸಂದರ್ಭದಲ್ಲಿಯೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು.ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ 21ನೇ ವಾರ್ಡ್ನ ನಗರಸಭೆ ಸದಸ್ಯ ಮಹಬೂಬ್ ಚುಮ್ಮಿ ನದಾಫ್ ಅವರು ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರು
. ಅವರ ಪ್ರಯತ್ನಕ್ಕೆ ಬೆಂಬಲವಾಗಿ ಕೃಷ್ಣಗೌಡ ಪಾಟೀಲ ಅವರು ವಿಶೇಷ ಕಾಳಜಿ ವಹಿಸಿದ್ದು, ಲೋಕೋಪಯೋಗಿ ಇಲಾಖೆಯಿಂದ (PWD) ಸುಮಾರು ₹21 ಲಕ್ಷ ವಿಶೇಷ ಅನುದಾನ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅನುದಾನ ಮಂಜೂರಾದ ಬಳಿಕ ಕಾಮಗಾರಿಯನ್ನು ಕೈಗೆತ್ತಿಕೊಂಡು ರಸ್ತೆ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಇದರಿಂದ ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿದ್ದ 21ನೇ ವಾರ್ಡ್ನ ನಿವಾಸಿಗಳಿಗೆ ಸಂಚಾರಕ್ಕೆ ಅನುಕೂಲವಾಗಲಿದೆ.
ಜನರ ಸಮಸ್ಯೆಗೆ ಸ್ಪಂದಿಸಿದ ಜನಪ್ರತಿನಿಧಿಗಳಿಗೆ ಅಭಿನಂದನೆದಶಕಗಳಿಂದ ಬಗೆಹರಿಯದೆ ಉಳಿದಿದ್ದ ಸಮಸ್ಯೆಗೆ ಪರಿಹಾರ ದೊರೆತಿರುವುದಕ್ಕೆ ವಾರ್ಡ್ನ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿಗೆ ಪ್ರಯತ್ನಿಸಿದ ಮಹಬೂಬ್ ಚುಮ್ಮಿ ನದಾಫ್ ಹಾಗೂ ವಿಶೇಷ ಕಾಳಜಿ ವಹಿಸಿದ ಕೃಷ್ಣಗೌಡ ಪಾಟೀಲ ಅವರಿಗೆ ಸ್ಥಳೀಯ ನಾಗರಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳು ಕೇವಲ ಭರವಸೆಗಳಿಗೆ ಸೀಮಿತವಾಗದೆ, ಜನರ ನಿತ್ಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತಿರಬೇಕು ಎಂಬುದಕ್ಕೆ 21ನೇ ವಾರ್ಡ್ನ ಸರ್ವಿಸ್ ರಸ್ತೆ ಕಾಮಗಾರಿ ಉತ್ತಮ ಉದಾಹರಣೆಯಾಗಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.ದಶಕಗಳ ಸಮಸ್ಯೆಗೆ ರಸ್ತೆ ರೂಪದಲ್ಲಿ ಪರಿಹಾರ ಸಿಕ್ಕಿದ್ದು, ಇದೀಗ ಈ ಮಾರ್ಗದ ಸುಗಮ ಸಂಚಾರವೇ ಕಾಮಗಾರಿಯ ಯಶಸ್ಸಿಗೆ ಸಾಕ್ಷಿಯಾಗಲಿದೆ.
