ಗದಗ 01: ಸಾಂಪ್ರದಾಯಿಕ ಹಬ್ಬಗಳು ಕೇವಲ ಸಾಂಸ್ಕೃತಿಕ ಆಚರಣೆಗಳಾಗದೆ, ಪ್ರಕೃತಿಯನ್ನು ರಕ್ಷಿಸುವ ವೈಚಾರಿಕ ವೇದಿಕೆಗಳಾಗಬೇಕು ಎಂದು ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಮುಳುಗುಂದ ಪ್ರತಿಪಾದಿಸಿದರು.
ನಗರದ ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್ 15ರಲ್ಲಿ ಕಾರ ಹುಣ್ಣಿಮೆ ಹಬ್ಬದ ಅಂಗವಾಗಿ ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಪ್ಲಾಸ್ಟಿಕ್ ರಹಿತ ಹಾಗೂ ಕಾಗದದ ಗಾಳಿಪಟ ತಯಾರಿಸುವ ವಿಶಿಷ್ಟ ಸ್ಪರ್ಧೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿ ಇಂದಿನ ಆಧುನಿಕ ಆಚರಣೆಗಳಲ್ಲಿ ಪ್ಲಾಸ್ಟಿಕ್ ಮಹಾಮಾರಿ ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು ಪ್ರಕೃತಿಯನ್ನು ನಾಶಮಾಡಿ ಆಚರಿಸುವ ಯಾವುದೇ ಹಬ್ಬ ನೈಜ ಸಂಸ್ಕೃತಿಯಾಗಲು ಸಾಧ್ಯವಿಲ್ಲ. ವಿಷಕಾರಿ ಪ್ಲಾಸ್ಟಿಕ್ನಿಂದ ಭೂಮಿಯನ್ನು ಮುಕ್ತಗೊಳಿಸುವ ಸಂಕಲ್ಪ ನಮ್ಮದಾಗಬೇಕು. ಇಂದು ಮುದ್ದು ಮಕ್ಕಳು ಕಾಗದದ ಗಾಳಿಪಟ ಹಾರಿಸುವ ಮೂಲಕ ಇಡೀ ಸಮಾಜಕ್ಕೆ ದೊಡ್ಡ ಪರಿಸರ ಜಾಗೃತಿಯ ಸಂದೇಶ ನೀಡಿದ್ದಾರೆ” ಎಂದುಶ್ರೀಮತಿ ಶಕುಂತಲಾ ಮುಳುಗುಂದ ಹೇಳಿದರು
ಸಹಶಿಕ್ಷಕಿಯವರಾದ ಶ್ರೀಮತಿ ಪ್ರೇಮ ಬ್ಯಾಳಿ ಅವರು ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಪರಿಸರ ಹಾನಿಯನ್ನು ತಡೆಯಲು ಬಾಲ್ಯದಿಂದಲೇ ಇಂತಹ ಪರ್ಯಾಯ ಮಾರ್ಗಗಳನ್ನು ರೂಢಿಸುವುದು ಇಂದಿನ ತುರ್ತು ಅಗತ್ಯ” ಎಂದರು. ಶಾಲೆಯ ಮುಖ್ಯೋಪಾಧ್ಯಾಯರಾದ ವಿ. ಎನ್. ಬಸಾಪುರ ಮಾತನಾಡಿ, ಕೇವಲ ಅಂಕ ಗಳಿಸುವ ಶಿಕ್ಷಣಕ್ಕಿಂತ ಇಂತಹ ಸೃಜನಶೀಲ ಮತ್ತು ವೈಚಾರಿಕ ವಿಚಾರಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಲ್ಪಟ್ಟಾಗ ಮಾತ್ರ ಅವರು ದೇಶದ ಜವಾಬ್ದಾರಿಯುತ ಪ್ರಜೆಗಳಾಗಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಗುರುಮಾತೆಯರಾದ ಬಿ. ಯಶೋಧ ಹಾಗೂ ವಿ. ಬಿ. ಕರಿಬಸನಗೌಡರ ಜಂಟಿಯಾಗಿ ಮಾತನಾಡಿ, ಮಣ್ಣಿನ ಉಸಿರನ್ನು ಉಳಿಸುವ ಈ ಹೋರಾಟ ತರಗತಿಯ ಕೊಠಡಿಯಿಂದಲೇ ಆರಂಭವಾಗಬೇಕು. ಮಕ್ಕಳು ರೂಪಿಸಿದ ಈ ಗಾಳಿಪಟಗಳು ಸ್ವಚ್ಛ ಭಾರತದ ಹಸಿರು ರೆಕ್ಕೆಗಳಿದ್ದಂತೆ” ಎಂದು ಶ್ಲಾಘಿಸಿದರು. ಸಂಸ್ಥೆಯ ಪ್ರಮುಖ ಪದಾಧಿಕಾರಿಗಳಾದ ಶ್ರೀಮತಿ ಜ್ಯೋತಿ ದೇಸಾಯಿಗೌಡರ ಹಾಗೂ ದೀಪಾ ಉಗಲಾಟ ಅವರು ಪ್ರತ್ಯೇಕವಾಗಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಪ್ರತಿ ಮನೆಯಲ್ಲೂ ಮಹಿಳೆಯರು ಮತ್ತು ಮಕ್ಕಳು ಹೊಸ ಚಳವಳಿ ಆರಂಭಿಸಬೇಕು ಎಂದು ಕರೆ ನೀಡಿದರು.*
ಪರಿಸರ ಸ್ನೇಹಿ ಗಾಳಿಪಟ ಸ್ಪರ್ಧೆಯ ವಿಜೇತರು:*
ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಕಾಗದದ ಮೂಲಕ ಪರಿಸರ ಸ್ನೇಹಿ ಗಾಳಿಪಟ ಸಿದ್ಧಪಡಿಸಿದ ಪವಿತ್ರ ಹಡಪದ ಪ್ರಥಮ ಸ್ಥಾನ ಪಡೆದರೆ, ಕಲೆಯೊಂದಿಗೆ ಪರಿಸರ ಪ್ರೇಮ ಮೆರೆದ ಅರ್ಚನಾ ಎಂಡಿಗೇರಿ ದ್ವಿತೀಯ ಹಾಗೂ ವಿನಾಯಕ ಖಾಟವಾ ತೃತೀಯ ಬಹುಮಾನ ಪಡೆದರು. ಬಾಲಕಿ ಆರಾಧ್ಯ ದಲಬಂಜನ್ ಸಮಾಧಾನಕರ ಬಹುಮಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು
. ವಿಜೇತ ಮುದ್ದು ಮಕ್ಕಳಿಗೆ ಸಂಸ್ಥೆಯ ವತಿಯಿಂದ ಬಹುಮಾನ ವಿತರಿಸಿ ಗೌರವಿಸಲಾಯಿತು. ಈ ಮಹತ್ತರ ಪರಿಸರ ಜಾಗೃತಿಯ ಆಂದೋಲನದಲ್ಲಿ ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಪದಾಧಿಕಾರಿಗಳು, ಶಾಲೆಯ ಶಿಕ್ಷಕ ವೃಂದ, ಗುರುಮಾತೆಯರು ಹಾಗೂ ನೂರಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
*ಪ್ಲಾಸ್ಟಿಕ್ ಮುಕ್ತ ಹೋರಾಟ ಶಾಲಾ ಕೊಠಡಿಯಿಂದಲೇ ಆರಂಭವಾಗಲಿ
*ಆಧುನಿಕತೆಯ ಮತ್ತು ಸೌಕರ್ಯದ ಹೆಸರಿನಲ್ಲಿ ನಾವು ಪ್ರತಿದಿನ ಪ್ರಕೃತಿಗೆ ಮಾಡುತ್ತಿರುವ ದ್ರೋಹ ಅಕ್ಷಮ್ಯ. ಸಾಂಪ್ರದಾಯಿಕ ಹಬ್ಬಗಳನ್ನು ಪ್ಲಾಸ್ಟಿಕ್ ಮಯವಾಗಿಸಿ ಭೂಮಿಯ ಉಸಿರುಗಟ್ಟಿಸುತ್ತಿದ್ದೇವೆ. ಈ ವಿಷವರ್ತುಲವನ್ನು ಮುರಿಯುವ ಕ್ರಾಂತಿಕಾರಿ ಬದಲಾವಣೆ ನಮ್ಮ ಶಾಲಾ ಕೊಠಡಿಗಳಿಂದಲೇ ಆರಂಭವಾಗಬೇಕಿದೆ. ಮಕ್ಕಳು ಇಂದು ಕಾಗದದ ಗಾಳಿಪಟಗಳನ್ನು ಸಿದ್ಧಪಡಿಸುವ ಮೂಲಕ ಕೇವಲ ಸ್ಪರ್ಧೆಯಲ್ಲಿ ಗೆದ್ದಿಲ್ಲ, ಬದಲಿಗೆ ಪ್ಲಾಸ್ಟಿಕ್ ಮಹಾಮಾರಿಯ ವಿರುದ್ಧದ ಹೋರಾಟಕ್ಕೆ ಹಸಿರು ಬಿತ್ತಿದ್ದಾರೆ. ಈ ಪುಟ್ಟ ಕೈಗಳ ಪರಿಸರ ಪ್ರೇಮ ಇಡೀ ಸಮಾಜದ ಕಣ್ಣು ತೆರೆಸುವಂತಾಗಲಿ.— ಶ್ರೀಮತಿ ಪ್ರೇಮ ಬ್ಯಾಳಿಸಹಶಿಕ್ಷಕರು, ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್ 15,
ವರದಿ-
ಕೃಷ್ಣಾ ಎಚ್ ಹಡಪದ 9845650612
