ಬೆಂಗಳೂರು: ರಾಜ್ಯದಲ್ಲಿ ಹೈನುಗಾರಿಕೆ, ಕುರಿ ಹಾಗೂ ಮೇಕೆ ಸಾಕಾಣಿಕೆಯನ್ನು ಅವಲಂಬಿಸಿರುವ ಲಕ್ಷಾಂತರ ರೈತರು ಮತ್ತು ಕುರಿಗಾಹಿಗಳ ಜೀವನೋಪಾಯವನ್ನು ಬಲಪಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಅನುಗ್ರಹ ಯೋಜನೆಗೆ ಬಾಕಿ ಇರುವ ₹97.57 ಕೋಟಿ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದೆ.
ಈ ಯೋಜನೆಯನ್ನು 2013-18ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜಾರಿಗೆ ತಂದಿತ್ತು. ಬಳಿಕದ ಸರ್ಕಾರಗಳ ಅವಧಿಯಲ್ಲಿ ಅನುದಾನದ ಕೊರತೆಯಿಂದ ಯೋಜನೆ ಸ್ಥಗಿತಗೊಂಡಿತ್ತು. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ಮರು ಜಾರಿಗೊಳಿಸಿದೆ
.2023ರಿಂದ ಇಲ್ಲಿಯವರೆಗೆ ಯೋಜನೆಗಾಗಿ ₹134 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ವ್ಯಯಿಸಲಾಗಿದೆ. ಆದರೆ ಇನ್ನೂ ₹97.57 ಕೋಟಿ ಅನುದಾನ ಬಿಡುಗಡೆ ಆಗಬೇಕಿದ್ದು, ಕೃಷಿಯ ಜೊತೆಗೆ ಪಶುಸಂಗೋಪನೆಯನ್ನು ಅವಲಂಬಿಸಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ.
ಸಣ್ಣ ಪ್ರಾಣಿಗಳ ಸಾವಿಗೆ ವಿತರಿಸಿದ ಪರಿಹಾರ:2023-24: 30,705 ಕುರಿ ಹಾಗೂ ಮೇಕೆಗಳಿಗೆ ₹14.93 ಕೋಟಿ.2024-25: 89,481 ಸಣ್ಣ ಪ್ರಾಣಿಗಳಿಗೆ ₹32.87 ಕೋಟಿ.2025-26: 74,801 ಕುರಿ ಹಾಗೂ ಮೇಕೆಗಳಿಗೆ ₹29 ಕೋಟಿ.2026-27 (ಕಳೆದ ತಿಂಗಳವರೆಗೆ): 22,579 ಕುರಿ ಹಾಗೂ ಮೇಕೆಗಳಿಗೆ ₹7.25 ಕೋಟಿ.ದೊಡ್ಡ ಜಾನುವಾರುಗಳ ಸಾವಿಗೆ ವಿತರಿಸಿದ ಪರಿಹಾರ:2023-24: 12,965 ಹಸು, ಎಮ್ಮೆ ಹಾಗೂ ಇತರೆ ದೊಡ್ಡ ಜಾನುವಾರುಗಳಿಗೆ ₹12.88 ಕೋಟಿ.2024-25: 30,289 ದೊಡ್ಡ ಜಾನುವಾರುಗಳಿಗೆ ₹14.99 ಕೋಟಿ.2025-26: 32,804 ದೊಡ್ಡ ಜಾನುವಾರುಗಳಿಗೆ ₹20.85 ಕೋಟಿ.2026-27 (ಇದುವರೆಗೆ): 6,202
ದೊಡ್ಡ ಜಾನುವಾರುಗಳಿಗೆ ₹5.25 ಕೋಟಿ.ರಾಜ್ಯದ ರೈತರು ಮತ್ತು ಪಶುಪಾಲಕರು ಬಾಕಿ ಪರಿಹಾರದ ನಿರೀಕ್ಷೆಯಲ್ಲಿದ್ದು, ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಸರ್ಕಾರದ ಗಮನ ಸೆಳೆಯಲಾಗಿದೆ.
ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಪಶುಸಂಗೋಪನೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳಿಗೆ ಆರ್ಥಿಕ ಭದ್ರತೆ ದೊರೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
