ಬೆಂಗಳೂರು: “ಪಾಕಿಸ್ತಾನ ನಮ್ಮ ಶತ್ರು ದೇಶವಲ್ಲ, ದ್ವೇಷದಿಂದ ಏನನ್ನೂ ಗೆಲ್ಲಲು ಸಾಧ್ಯವಿಲ್ಲ” ಎಂಬ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಎಸ್. ಶಿವಳ್ಳಿ ಅವರು ಸಂಘ ಪರಿವಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ
.ಈ ಹಿಂದೆ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದ ಮಾಜಿ ಸಂಸದೆ ರಮ್ಯಾ ಅವರನ್ನು ದೇಶದ್ರೋಹಿ ಎಂದು ಟೀಕಿಸಿದ್ದವರು, ಇದೀಗ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎಂದು ಶಿವಳ್ಳಿ ಪ್ರಶ್ನಿಸಿದ್ದಾರೆ.“ಪಾಕಿಸ್ತಾನದಲ್ಲಿಯೂ ನಮ್ಮಂತೆಯೇ ಮನುಷ್ಯರು ಇದ್ದಾರೆ, ಅಲ್ಲಿಯೂ ಒಳ್ಳೆಯ ಜನರಿದ್ದಾರೆ ಎಂಬ ಸೌಹಾರ್ದದ ಮಾತುಗಳನ್ನು ಹೇಳಿದಾಗ ಒಬ್ಬರನ್ನು ದೇಶದ್ರೋಹಿ ಎಂದು ಕರೆಯುವುದು ಸರಿಯೇ? ಇದೇ ಮಾತನ್ನು ಈಗ ಆರ್ಎಸ್ಎಸ್ನ ವರಿಷ್ಠರು ಹೇಳಿದ್ದಾರೆ.
ಹಾಗಾದರೆ ಅವರನ್ನು ಏನೆಂದು ಕರೆಯಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.ಪಾಕಿಸ್ತಾನ, ಬಾಂಗ್ಲಾದೇಶ, ಜಮ್ಮು-ಕಾಶ್ಮೀರ, ಟಿಪ್ಪು ಸುಲ್ತಾನ್, ಇಸ್ಲಾಂ, ರಾಮಮಂದಿರ ಹಾಗೂ ಬಾಬರಿ ಮಸೀದಿ ಸೇರಿದಂತೆ ಧಾರ್ಮಿಕ ಮತ್ತು ರಾಜಕೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಯುವಕರಲ್ಲಿ ಕೋಮು ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಶಿವಳ್ಳಿ ಆರೋಪಿಸಿದರು.“
ರಾಜಕೀಯ ಲಾಭಕ್ಕಾಗಿ ದೇವರು, ಧರ್ಮ, ಪಾಕಿಸ್ತಾನ, ಬಾಂಗ್ಲಾದೇಶ, ರಾಮಮಂದಿರ, ಬಾಬರಿ ಮಸೀದಿ, ಟಿಪ್ಪು ಸುಲ್ತಾನ್, ಹಲಾಲ್–ಜಟಕಾ ಹಾಗೂ ಹಿಜಾಬ್ ಮುಂತಾದ ವಿಚಾರಗಳನ್ನು ಬಳಸಿಕೊಂಡು ಸಮಾಜದಲ್ಲಿ ವಿಭಜನೆ ಮೂಡಿಸುವುದು ಸರಿಯಲ್ಲ. ಇಂತಹ ಬೆಳವಣಿಗೆಗಳು ದೇಶದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುತ್ತವೆ” ಎಂದು ಅವರು ಹೇಳಿದರು.ಪುಲ್ವಾಮಾ ಹಾಗೂ ಪಹಲ್ಗಾಮ್ ಘಟನೆಗಳನ್ನು ಉಲ್ಲೇಖಿಸಿದ ಅವರು, ಉಗ್ರ ಕೃತ್ಯಗಳಲ್ಲಿ ಅಮಾಯಕ ನಾಗರಿಕರು ಹಾಗೂ ಸೈನಿಕರು ಪ್ರಾಣ ಕಳೆದುಕೊಂಡಿರುವುದನ್ನು ಮರೆಯಬಾರದು ಎಂದರು.
ಪಾಕಿಸ್ತಾನಕ್ಕೆ ಸಂಬಂಧಿಸಿದ ಭದ್ರತಾ ವಿಚಾರಗಳಲ್ಲಿ ದೇಶದ ಹಿತಾಸಕ್ತಿಯನ್ನು ಕಾಪಾಡುವುದು ಅಗತ್ಯವಾಗಿದ್ದರೂ, ಸಾಮಾನ್ಯ ಜನರ ನಡುವೆ ದ್ವೇಷವನ್ನು ಬೆಳೆಸುವುದು ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟರು.ಕರಾವಳಿ ಕರ್ನಾಟಕದಲ್ಲಿ ನಡೆದ ಕೋಮು ಸಂಘರ್ಷಗಳು ಹಾಗೂ ಯುವಕರ ಜೀವಹಾನಿಯನ್ನೂ ಉಲ್ಲೇಖಿಸಿದ ಶಿವಳ್ಳಿ, “ರಾಜಕೀಯ ಮತ್ತು ಧಾರ್ಮಿಕ ವಿಚಾರಗಳನ್ನು ಬಳಸಿಕೊಂಡು ಯುವಕರ ಮನಸ್ಸಿನಲ್ಲಿ ದ್ವೇಷದ ಬೀಜ ಬಿತ್ತುವುದರಿಂದ ಸಮಾಜಕ್ಕೆ ಯಾವುದೇ ಒಳಿತಾಗುವುದಿಲ್ಲ
. ಕರ್ನಾಟಕದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ಉಳಿಯಬೇಕು” ಎಂದು ಆಗ್ರಹಿಸಿದರು.ದೇಶದ ಜನರು ಜಾತಿ–ಧರ್ಮದ ರಾಜಕಾರಣಕ್ಕಿಂತ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಅವರು ಕರೆ ನೀಡಿದರು
.“ದ್ವೇಷದಿಂದ ಏನನ್ನೂ ಗೆಲ್ಲಲು ಸಾಧ್ಯವಿಲ್ಲ.
ಸೌಹಾರ್ದತೆ, ಸಹಬಾಳ್ವೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳೇ ದೇಶದ ಬಲ” ಎಂದು ಮುತ್ತಣ್ಣ ಎಸ್. ಶಿವಳ್ಳಿ ಹೇಳಿದರು.“ಜೈ ಸಂವಿಧಾನ, ಜೈ ಬುದ್ಧ–ಬಸವ–ಅಂಬೇಡ್ಕರ್, ಜೈ ಅಹಿಂದ; ಸರ್ವ ಜನಾಂಗದ ಶಾಂತಿಯ ತೋಟವೇ ನಮ್ಮ ಸಂವಿಧಾನ” ಎಂದು ಅವರು ಸಂದೇಶ ನೀಡಿದರು.
