ಲಕ್ನೋ: ಕೌಟುಂಬಿಕ ಕಲಹ ಹಾಗೂ ವಿಚ್ಛೇದನದ ವಿಚಾರಕ್ಕೆ ಸಂಬಂಧಿಸಿದ ವೈಮನಸ್ಸಿನ ಹಿನ್ನೆಲೆಯಲ್ಲಿ ಎಸ್ಬಿಐ ಉದ್ಯೋಗಿಯೊಬ್ಬ ತನ್ನ ಪತ್ನಿ ಹಾಗೂ ಸಹೋದರಿಯನ್ನು ಗುಂಡಿಕ್ಕಿ ಹತ್ಯೆಗೈದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ
.ಮೃತರನ್ನು ಎಸ್ಬಿಐ ಉದ್ಯೋಗಿ ಮಾನಸ್ ವಾಜಪೇಯಿ, ಅವರ ಪತ್ನಿ ದಿವ್ಯಾ ಹಾಗೂ ಸಹೋದರಿ ಎಂದು ಗುರುತಿಸಲಾಗಿದೆ. ಕೃತ್ಯಕ್ಕೂ ಮುನ್ನ ಮಾನಸ್ ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿದ್ದ ಎನ್ನಲಾಗಿದ್ದು, ಪೊಲೀಸರು ಈ ಅಂಶವನ್ನೂ ತನಿಖೆಯ ಭಾಗವಾಗಿ ಪರಿಶೀಲಿಸುತ್ತಿದ್ದಾರೆ.
ವಿಚ್ಛೇದನದ ವಿಚಾರವಾಗಿ ದಂಪತಿ ನಡುವೆ ವೈಮನಸ್ಸುಮಾನಸ್ ಹಾಗೂ ದಿವ್ಯಾ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಕಳೆದ ವರ್ಷ ದಿವ್ಯಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕಚೇರಿ ಬಳಿ ಪತ್ನಿಯ ಮೇಲೆ ಗುಂಡಿನ ದಾಳಿಪೂರ್ವಯೋಜಿತವಾಗಿ ಕೃತ್ಯ ಎಸಗಲು ಮುಂದಾಗಿದ್ದ ಮಾನಸ್, ಐಸಿಐಸಿಐ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ದಿವ್ಯಾ ಅವರ ಕಚೇರಿ ಬಳಿ ತೆರಳಿದ್ದಾನೆ ಎನ್ನಲಾಗಿದೆ. ಆಕೆಯನ್ನು ಹೊರಗೆ ಕರೆಸಿಕೊಂಡ ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಮಾನಸ್ ಗುಂಡು ಹಾರಿಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ.
ತೀವ್ರವಾಗಿ ಗಾಯಗೊಂಡಿದ್ದ ದಿವ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಮನೆಗೆ ತೆರಳಿ ಸಹೋದರಿಗೂ ಗುಂಡುಪತ್ನಿಯ ಮೇಲೆ ದಾಳಿ ನಡೆಸಿದ ಬಳಿಕ ಮಾನಸ್ ಮನೆಗೆ ತೆರಳಿದ್ದು, ಅಲ್ಲಿ ತನ್ನ ಸಹೋದರಿಯ ಮೇಲೂ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ
. ಬಳಿಕ ಅದೇ ಬಂದೂಕಿನಿಂದ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಕೃತ್ಯಕ್ಕೂ ಮುನ್ನ ವಾಟ್ಸಾಪ್ ಸ್ಟೇಟಸ್ಆತ್ಮಹತ್ಯೆಗೂ ಮುನ್ನ ಮಾನಸ್ ವಾಟ್ಸಾಪ್ನಲ್ಲಿ ಪತ್ನಿ ಹಾಗೂ ಕುಟುಂಬದವರ ಕುರಿತು ಆರೋಪಗಳನ್ನು ಒಳಗೊಂಡ ಸ್ಟೇಟಸ್ ಹಾಕಿದ್ದ ಎನ್ನಲಾಗಿದೆ.
ಈ ಸ್ಟೇಟಸ್ ಗಮನಿಸಿದ ಬಳಿಕ ನೆರೆಹೊರೆಯವರು ಮನೆಗೆ ತೆರಳಿ ಪರಿಶೀಲಿಸಿದಾಗ ರಕ್ತದ ಮಡುವಿನಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆಗೆ ಕೌಟುಂಬಿಕ ಕಲಹ ಮತ್ತು ವಿಚ್ಛೇದನದ ವಿಚಾರವೇ ಕಾರಣವಾಗಿರಬಹುದು ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸೂಚನೆ: ವಾಟ್ಸಾಪ್ ಸ್ಟೇಟಸ್ನಲ್ಲಿ ಮಾಡಲಾಗಿದ್ದ ಆರೋಪಗಳು ತನಿಖೆಯಿಂದ ದೃಢಪಟ್ಟಿರುವುದಿಲ್ಲ. ಪ್ರಕರಣದ ಸಂಪೂರ್ಣ ಸತ್ಯಾಂಶ ಪೊಲೀಸ್ ತನಿಖೆ ಹಾಗೂ ಅಧಿಕೃತ ಮಾಹಿತಿಯಿಂದಲೇ ಸ್ಪಷ್ಟವಾಗಬೇಕಿದೆ.
