ದಾವಣಗೆರೆ, ಆಗಸ್ಟ್ 25: ಸರ್ಕಾರಿ ಇಲಾಖೆಗಳಲ್ಲಿನ ಕರ್ತವ್ಯಲೋಪ, ನಿರ್ಲಕ್ಷ್ಯ, ದುರಾಡಳಿತ ಹಾಗೂ ಲಂಚಗುಳಿತನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲೋಕಾಯುಕ್ತ ತಂಡ ನಡೆಸಿದ ಅನಿರೀಕ್ಷಿತ ತಪಾಸಣೆ ವೇಳೆ ಕಂಡುಬಂದಿರುವ ಅವ್ಯವಸ್ಥೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು
.ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ ಸುಮಾರು 42 ಹಾಸ್ಟೆಲ್ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಲೋಕಾಯುಕ್ತ ತಂಡ ತಪಾಸಣೆ ನಡೆಸಿತ್ತು.ಹಾಸ್ಟೆಲ್ಗಳ ಅವ್ಯವಸ್ಥೆಗೆ ತರಾಟೆಹೆಚ್.ಕೆ.ಆರ್. ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ನ ಒಂದೇ ಹಾಲ್ನಲ್ಲಿ 37 ವಿದ್ಯಾರ್ಥಿನಿಯರನ್ನು ಇರಿಸಿರುವುದನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕಟ್ಟಡಗಳನ್ನು ಬಾಡಿಗೆಗೆ ಪಡೆಯುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು.
ಶಕ್ತಿನಗರದ ಬಾಲಕರ ಹಾಸ್ಟೆಲ್ನಲ್ಲಿ 16 ಮೂಟೆ ಗೋಧಿ ಆರು ತಿಂಗಳಿನಿಂದ ಬಳಕೆಯಾಗದೆ ಹಾಳಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಪ್ರಕರಣ ದಾಖಲಿಸಲು ಸೂಚಿಸಲಾಯಿತು.ಅರಸಾಪುರ ಹಾಸ್ಟೆಲ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗಿರುವ ಆರೋಗ್ಯ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಲಾಯಿತು.
ಶಾಲೆಗಳಲ್ಲಿ ಮಕ್ಕಳಿಗೆ ಮೂಲಸೌಕರ್ಯ ಇಲ್ಲವೇ?ಜಿಲ್ಲೆಯ ಹಲವು ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ನೆಲದ ಮೇಲೆ ಕುಳಿತು ಕಲಿಯುತ್ತಿರುವ ವಿಚಾರಕ್ಕೂ ಲೋಕಾಯುಕ್ತ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು
.ಡೆಸ್ಕ್, ಕುಡಿಯುವ ನೀರು, ಕಿಟಕಿಗಳಿಗೆ ಮೆಶ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ತುರ್ತಾಗಿ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ವಾಸ್ತವ ಪರಿಸ್ಥಿತಿಯನ್ನು ಮರೆಮಾಚದೆ ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡಬೇಕು. ಸಮಸ್ಯೆಗಳನ್ನು ಮುಚ್ಚಿಡುವುದರಿಂದ ವ್ಯವಸ್ಥೆ ಸುಧಾರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು
.ಪಂಚಾಯಿತಿಗಳಲ್ಲೂ ಹಣ ದುರುಪಯೋಗದ ಆರೋಪಜಗಳೂರು ತಾಲ್ಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿಯಲ್ಲಿ ₹16.5 ಲಕ್ಷ ದುರುಪಯೋಗ ಹಾಗೂ ಹನುಮಂತಾಪುರ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ರಿಂದ ₹2.5 ಲಕ್ಷ ದುರುಪಯೋಗವಾಗಿರುವ ಆರೋಪಗಳ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.“
ಭ್ರಷ್ಟ ಅಧಿಕಾರಿಗಳು ಸರ್ಕಾರಿ ಸೇವೆಯಲ್ಲಿ ಮುಂದುವರಿಯಬಾರದು” ಎಂದು ನ್ಯಾಯಮೂರ್ತಿಗಳು ಖಡಕ್ ಸಂದೇಶ ನೀಡಿದರು.ಸಾರ್ವಜನಿಕರ ಅರ್ಜಿಗಳನ್ನು ನಿರ್ಲಕ್ಷಿಸಿದರೆ ಕ್ರಮಹರಿಹರ, ಚನ್ನಗಿರಿ, ಜಗಳೂರು, ಹೊನ್ನಾಳಿ ಸೇರಿದಂತೆ ವಿವಿಧ ಪುರಸಭೆ ಹಾಗೂ ನಗರಸಭೆ ಕಚೇರಿಗಳಲ್ಲಿ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಸರಿಯಾಗಿ ದಾಖಲಿಸದೆ ಬಾಕಿ ಇಡುತ್ತಿರುವ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದರು.
ಅರ್ಜಿಗಳನ್ನು ಕಡ್ಡಾಯವಾಗಿ ದಾಖಲಿಸಿ, ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಇಲ್ಲವಾದರೆ ಕ್ರಿಮಿನಲ್ ಹಾಗೂ ಸಿವಿಲ್ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು
.ಆರೋಗ್ಯ ಕೇಂದ್ರಗಳಲ್ಲೂ ಲೋಪ ಪತ್ತೆಆನಗೋಡು, ಕಂದಗಲ್ಲು ಹಾಗೂ ಹದಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ತಪಾಸಣೆ ವೇಳೆ ಶೌಚಾಲಯದ ಕೊರತೆ, ಸಿಬ್ಬಂದಿ ಗೈರುಹಾಜರಿ, ಔಷಧ ಖರೀದಿ ದಾಖಲೆಗಳ ಕೊರತೆ ಸೇರಿದಂತೆ ಹಲವು ಲೋಪಗಳು ಕಂಡುಬಂದಿವೆ.
ಮಧುಮೇಹದ ಸಾವಿರಾರು ಮಾತ್ರೆಗಳು ಅವಧಿ ಮೀರುವ ಹಂತದಲ್ಲಿರುವುದು ಹಾಗೂ ಹೆರಿಗೆಗೆ ಹಣ ಪಡೆಯಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಬಗ್ಗೆಯೂ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಯಿತು
.“ಲಂಚಗುಳಿತನವನ್ನು ಲೋಕಾಯುಕ್ತ ಸಹಿಸುವುದಿಲ್ಲ” ಎಂದು ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಸ್ಪಷ್ಟಪಡಿಸಿದರು.ಶಾಂತಿ ಸಾಗರ ಕೆರೆ ಸಂರಕ್ಷಣೆಗೆ ಸೂಚನೆಶಾಂತಿ ಸಾಗರ ಕೆರೆಗೆ ಸುತ್ತಮುತ್ತಲಿನ ಗ್ರಾಮಗಳ ಕೊಳಚೆ ನೀರು ಸೇರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಕೊಳಚೆ ನೀರು ಶುದ್ಧೀಕರಣ ಘಟಕ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಲಾಯಿತು.
ಲೋಕಾಯುಕ್ತ ತಪಾಸಣೆಯಿಂದ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಲೋಪಗಳು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಇನ್ನು ಮುಂದೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪಾರದರ್ಶಕವಾಗಿ ಹಾಗೂ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ
.ಮಾಹಿತಿ ಸಾಮ್ರಾಟ ಜನರ ಹಕ್ಕು • ಅಧಿಕಾರಿಗಳ ಹೊಣೆಗಾರಿಕೆ • ಭ್ರಷ್ಟಾಚಾರದ ವಿರುದ್ಧ ಧ್ವನಿ
