ಗದಗ: ಜಿಲ್ಲೆಯ ಪ್ರೌಢಶಾಲೆಗಳ ಎಸ್ಎಸ್ಎಲ್ಸಿ ಗುಣಾತ್ಮಕ ಫಲಿತಾಂಶವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗಾಗಿ ಒಂದು ದಿನದ ವಿಶೇಷ ಶಿಬಿರವನ್ನು ಸೋಮವಾರ ನಗರದ ಡಂಬಳನಾಕಾದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಆಯೋಜಿಸಲಾಯಿತು
.ಶಿಬಿರದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಸುಮಾರು 320ಕ್ಕೂ ಅಧಿಕ ಮುಖ್ಯ ಶಿಕ್ಷಕರು ಭಾಗವಹಿಸಿ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಪರೀಕ್ಷಾ ಸಿದ್ಧತೆ ಹಾಗೂ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ಪಡೆದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿಡಿಪಿಐ ಆರ್. ಎಸ್. ಬುರಡಿ ಅವರು “ಮಕ್ಕಳ ಸುರಕ್ಷತೆಯೊಂದಿಗೆ ಗುಣಮಟ್ಟದ ಶಿಕ್ಷಣ” ಎಂಬ ಆಶಯದೊಂದಿಗೆ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿ ಫಲಿತಾಂಶವನ್ನು ಇನ್ನಷ್ಟು ಗುಣಾತ್ಮಕವಾಗಿ ಸುಧಾರಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಪ್ರತಿ ಮಗುವಿನ ಕಲಿಕೆಯ ಪ್ರಗತಿಯನ್ನು ನಿರಂತರವಾಗಿ ದಾಖಲಿಸುವುದು, ಸಂಕಲನಾತ್ಮಕ ಪರೀಕ್ಷೆ–1ಕ್ಕೆ ಸಂಬಂಧಿಸಿದ ಎಸ್ಒಪಿ ಅನುಸರಿಸುವುದು, Mission 60+ ಅನುಷ್ಠಾನ, ಕಲಿಕಾ ಕೊರತೆ ಹೊಂದಿರುವ ಹಾಗೂ ಹೆಚ್ಚುವರಿ ಶೈಕ್ಷಣಿಕ ಬೆಂಬಲದ ಅಗತ್ಯವಿರುವ ಮಕ್ಕಳನ್ನು ಗುರುತಿಸಿ ವಿಶೇಷ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು
.ನಿಧಾನಗತಿಯ ಕಲಿಕೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಬೆಂಬಲ ನೀಡುವುದು, ಮನೆ ಭೇಟಿ ಹಾಗೂ ‘ಓದು ಮನೆ’ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಮುಖ್ಯ ಶಿಕ್ಷಕರಿಗೆ ಸಲಹೆ ನೀಡಿದರು.ಜಿಲ್ಲೆಯ ಕೆಪಿಎಸ್ ಹಾಗೂ ಪಿಎಂ ಮಾದರಿ ಶಾಲೆಗಳು ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಿಸಿ, ಇತರ ಶಾಲೆಗಳಿಗೆ ಮಾದರಿಯಾಗಬೇಕು
. ಶಾಲೆಗಳಲ್ಲಿ ಕೌಶಲ್ಯ ಶಿಕ್ಷಣ, ಮೌಲ್ಯ ಶಿಕ್ಷಣ, ಮಕ್ಕಳ ಸುರಕ್ಷತೆ, ಬಾಲ್ಯ ವಿವಾಹ ತಡೆ, ಪೋಕ್ಸೋ ಕಾಯ್ದೆ, ಮಹಿಳೆಯರಿಗಾಗಿ ದೂರು ನಿವಾರಣಾ ಸಮಿತಿ, ನಶಾಮುಕ್ತ ಶಾಲಾ ವಾತಾವರಣ, KAAMS ಹಾಗೂ ವಿದ್ಯಾರ್ಥಿಗಳ ನಿರಂತರ ಹಾಜರಾತಿ ಕುರಿತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು
.“ಪ್ರತಿ ಮಗುವಿನ ಕಲಿಕೆಯ ಮೇಲೆ ವೈಯಕ್ತಿಕ ಗಮನ ಹರಿಸುವ ಮೂಲಕ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ನೀಡಬೇಕು. ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶವನ್ನು ಇನ್ನಷ್ಟು ಗುಣಾತ್ಮಕವಾಗಿ ಸುಧಾರಿಸುವ ಗುರಿಯೊಂದಿಗೆ ಎಲ್ಲರೂ ಪಣತೊಟ್ಟು ಕಾರ್ಯನಿರ್ವಹಿಸಬೇಕು” ಎಂದು ಆರ್. ಎಸ್. ಬುರಡಿ ಹೇಳಿದರು.
ಜಿಲ್ಲೆಯ ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಎಚ್. ಬಿ. ರೆಡ್ಡರ ಅವರು ಸಂಕಲನಾತ್ಮಕ ಪರೀಕ್ಷೆ–1 ಹಾಗೂ ಅರ್ಧವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದ ಕಾರ್ಯಾಚರಣೆ ಮಾರ್ಗಸೂಚಿ (SOP), ಪರೀಕ್ಷಾ ಸಿದ್ಧತೆ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಹಾಗೂ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು PPT ಮೂಲಕ ವಿವರಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕದ ಎಪಿಸಿಓ ಶಿವಕುಮಾರ ಕುರಿಯವರ ಅವರು ಸಮಗ್ರ ಶಿಕ್ಷಣ ಕರ್ನಾಟಕದ ವಿವಿಧ ಚಟುವಟಿಕೆಗಳು, ELC ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವ ಕುರಿತು ಮಾಹಿತಿ ನೀಡಿದರು.ಉಪನ್ಯಾಸಕ ಕೊಟ್ರೇಶ್ ವಿಭೂತಿ ಅವರು ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮದಡಿ ನಡೆಯುವ ವಿವಿಧ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು.
ಸುಧಾ ಬನ್ನಿಕಲ್ ಅವರು FLN ಕುರಿತು ಹಾಗೂ ಬಿ. ಎಫ್. ಅರವಟಗಿ ಅವರು ವೃತ್ತಿ ಮಾರ್ಗದರ್ಶನ ಕುರಿತು ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಯಟ್ ಪ್ರಾಂಶುಪಾಲ ಕೆ. ಡಿ. ಬಡಿಗೇರ ಅವರು ಜನಸಂಖ್ಯೆಯಲ್ಲಿನ Fertility Rate ಇಳಿಕೆ, ಶಾಲೆಯಿಂದ ಹೊರಗುಳಿದ ಮಕ್ಕಳ ಸಮಸ್ಯೆ ಹಾಗೂ ಅಂತಹ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಮರಳಿ ತರಲು ಮನೆ ಭೇಟಿ, ‘ಓದು ಮನೆ’ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವನ್ನು ವಿವರಿಸಿದರು
.ಕಾರ್ಯಕ್ರಮದ ಆರಂಭದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಯಂತಿ ಅಕ್ಕನವರು ಮಾನವೀಯ ಮೌಲ್ಯ, ನೈತಿಕ ಮೌಲ್ಯ, ಆಧ್ಯಾತ್ಮಿಕ ಮೌಲ್ಯ ಹಾಗೂ ದೈವೀ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು
.ಈ ಸಂದರ್ಭದಲ್ಲಿ ಇಲಾಖೆಯ ಎಂ. ಎಚ್. ಕಂಬಳಿ, ಡಿವೈಪಿಸಿ (ಕಾರ್ಯಕ್ರಮ), ರವಿಪ್ರಕಾಶ್ ಎಸ್. ಎನ್. (ಗುಣಮಟ್ಟ), ಎಸ್. ಎನ್. ಪಾಟೀಲ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಸುಮಾರು 320ಕ್ಕೂ ಅಧಿಕ ಪ್ರೌಢಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು
