ಲಕ್ಷ್ಮೇಶ್ವರ, ಜುಲೈ 28: ಅಮ್ಮ ಫೌಂಡೇಶನ್ (ರಿ), ಬೆಂಗಳೂರು ವತಿಯಿಂದ ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕೊಂಡಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್, ನೋಟ್ಬುಕ್ ಹಾಗೂ ಪೆನ್ಗಳನ್ನು ವಿತರಿಸಲಾಯಿತು
.ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ಈ ವಿಶೇಷ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮವನ್ನು ಅಮ್ಮ ಫೌಂಡೇಶನ್ ಅಧ್ಯಕ್ಷ ಹಾಗೂ ವಕೀಲ ಮೈಲಾರಪ್ಪ ಡಿ.ಎಚ್. ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ್ ಸೀಮಿಕೇರಿ, ಗ್ರಾಮದ ಹಿರಿಯರು, ಶಾಲೆಯ ಶಿಕ್ಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು
.ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ್ ಸೀಮಿಕೇರಿ, ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಮ್ಮ ಫೌಂಡೇಶನ್ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾಗಿದೆ. ಸರ್ಕಾರಿ ಶಾಲೆಗಳಿಗೆ ಇಂತಹ ಸಾಮಾಜಿಕ ಸಹಕಾರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಡಿಜಿಟಲ್ ಸ್ಮಾರ್ಟ್ ಬೋರ್ಡ್ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಅಮ್ಮ ಫೌಂಡೇಶನ್ ವತಿಯಿಂದ ಅದನ್ನು ಒದಗಿಸುವಂತೆ ಮನವಿ ಮಾಡಿದರು.ಮನವಿಗೆ ಸ್ಪಂದಿಸಿದ ಅಮ್ಮ ಫೌಂಡೇಶನ್ ಅಧ್ಯಕ್ಷ ಮೈಲಾರಪ್ಪ ಡಿ.ಎಚ್. ಮಾತನಾಡಿ, ತಾವು ಕಲಿತು ಬೆಳೆದ ಊರಿನ ಸರ್ಕಾರಿ ಶಾಲೆಗಳಿಗೆ ಸೇವೆ ಸಲ್ಲಿಸುವುದು ಹೆಮ್ಮೆಯ ವಿಷಯವಾಗಿದೆ.
ಮುಂದಿನ ದಿನಗಳಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ, ಇತರ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಸಾಮಗ್ರಿಗಳ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನವಿಯಂತೆ ಸಂಕದಾಳ ಸರ್ಕಾರಿ ಶಾಲೆಗೆ ಶೀಘ್ರದಲ್ಲೇ ಡಿಜಿಟಲ್ ಸ್ಮಾರ್ಟ್ ಬೋರ್ಡ್ ಒದಗಿಸುವುದಾಗಿ ಭರವಸೆ ನೀಡಿದರು.ಗ್ರಾಮದ ನಿವೃತ್ತ ಸೈನಿಕ ಬಸವರಾಜ ಸೂರಣಗಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಅಮ್ಮ ಫೌಂಡೇಶನ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.ಗ್ರಾಮದ ಹಿರಿಯ ಹಾಲಪ್ಪ ಸೂರಣಗಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಆಧಾರವಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೇರಣೆ ನೀಡಲಿವೆ ಎಂದು ಅಭಿಪ್ರಾಯಪಟ್ಟರು
.ಎಸ್ಡಿಎಂಸಿ ಅಧ್ಯಕ್ಷ ರವಿ ಹರಿಜನ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದುರಗಪ್ಪ ಹರಿಜನ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಂಜುನಾಥ್ ವಾರದ್, ಲಕ್ಷ್ಮೇಶ್ವರ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ನಿರ್ದೇಶಕ ಶರಣು ಸೋಗಿ, ಗದಗ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ಹಿರೇಮಠ್, ಶ್ರೀಮತಿ ನಂದಣ್ಣವರ್ ದಂಪತಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು
.ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಕನ್ನಡ ನಾಡಗೀತೆಯನ್ನು ಹಾಡಿ ಎಲ್ಲರಲ್ಲೂ ಕನ್ನಡಾಭಿಮಾನ ಮೂಡಿಸಿದರು. ಶಾಲೆಯ ಪ್ರಧಾನಗುರು ಎಸ್.ಎಸ್. ಉಪ್ಪಿನ ಸ್ವಾಗತಿಸಿದರು. ಅತಿಥಿ ಶಿಕ್ಷಕ ವೈ.ಎಸ್. ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು. ಶಿಕ್ಷಣ ಪ್ರೇಮಿಗಳು, ಗ್ರಾಮದ ಹಿರಿಯರು, ಶಾಲಾ ಸಿಬ್ಬಂದಿ ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಅಣ್ಣಪ್ಪ ಗುತ್ತೆಮ್ಮನವರ
