ಬೆಂಗಳೂರು: ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಸುಮಾರು 8 ತಿಂಗಳ ಬಳಿಕ ಪತ್ತೆಯಾಗಿದ್ದಾರೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತೇಜಸ್ವಿನಿ ಜನವರಿ 31ರಂದು ಮನೆಯಿಂದ ಕಾಲೇಜಿಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು.
ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾದ ಹಿನ್ನೆಲೆಯಲ್ಲಿ ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಹಲವು ತಿಂಗಳು ಕಳೆದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ತನಿಷ್ಕಾ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಹೈಕೋರ್ಟ್ ನಿರ್ದೇಶನದಂತೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.
ಕಳೆದ ಮೂರು ತಿಂಗಳಿಂದ ಸಿಐಡಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ಈ ಹಿಂದೆ ವಿದ್ಯಾರಣ್ಯಪುರ ಪೊಲೀಸರ ತನಿಖೆಯಲ್ಲಿ ಇಬ್ಬರು ಯುವತಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ದೊರೆತಿತ್ತು. ಅಲ್ಲಿ ಮಗುವೊಂದರೊಂದಿಗೆ ಆಟವಾಡಿದ್ದ ಇಬ್ಬರೊಂದಿಗೆ ಮಗುವಿನ ತಾಯಿ ಸೆಲ್ಫಿ ತೆಗೆದುಕೊಂಡಿದ್ದ ಮಾಹಿತಿ ಕೂಡ ತನಿಖೆಯಲ್ಲಿ ಪ್ರಮುಖ ಸುಳಿವಾಗಿತ್ತು
. ಆದರೆ ನಂತರ ಅವರ ಪತ್ತೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ.ಈ ನಡುವೆ ಹೊಸ ಸಿಮ್ ಕಾರ್ಡ್ ಪಡೆಯಲು ತನಿಷ್ಕಾ ಆಧಾರ್ ಕಾರ್ಡ್ ಬಳಸಿದಾಗ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಆಧಾರ್ ಸಂಖ್ಯೆಯ ಬಳಕೆಯ ಕುರಿತು ಸೇವಾ ಪೂರೈಕೆದಾರರಿಂದ ಸಿಐಡಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ತನಿಖೆಯ ವೇಳೆ ಮಲೆ ಮಹದೇಶ್ವರ ಬೆಟ್ಟದ ಪ್ರದೇಶದಲ್ಲಿ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯ ಇಬ್ಬರು ಯುವತಿಯರಿಗೆ ಆಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಕುಟುಂಬದಲ್ಲಿ ಸಮಸ್ಯೆಗಳಿದ್ದ ಹಿನ್ನೆಲೆಯಲ್ಲಿ ತನಿಷ್ಕಾ ಆ ಯುವಕನಿಗೆ ತಮ್ಮ ಬಗ್ಗೆ ತಪ್ಪು ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಬಳಿಕ ಇಬ್ಬರೂ ಆ ಯುವಕನೊಂದಿಗೆ ತೆರಳಿದ್ದರು.ಮುಂದೆ ತನಿಷ್ಕಾ ಆ ಯುವಕನನ್ನು ವಿವಾಹವಾಗಿದ್ದು, ಆತನೊಂದಿಗೆ ವಾಸವಾಗಿದ್ದಳು ಎನ್ನಲಾಗಿದೆ. ತೇಜಸ್ವಿನಿಯನ್ನು ತನ್ನ ತಂಗಿ ಎಂದು ಪರಿಚಯಿಸಿ ಜೊತೆಯಲ್ಲೇ ಇರಿಸಿಕೊಂಡಿದ್ದಳು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.ಸಿಮ್ ಖರೀದಿಸಲು ತನಿಷ್ಕಾ ಆಧಾರ್ ಕಾರ್ಡ್ ಬಳಸಿದ ಹಿನ್ನೆಲೆಯಲ್ಲಿ ದೊರೆತ ಸುಳಿವನ್ನು ಆಧರಿಸಿ ಸಿಐಡಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಕೊನೆಗೂ ಇಬ್ಬರು ಯುವತಿಯರನ್ನು ಪತ್ತೆಹಚ್ಚಿದ್ದಾರೆ
.ಇದೀಗ ಪ್ರಕರಣ ಮತ್ತೊಂದು ಮಹತ್ವದ ಹಂತ ತಲುಪಿದ್ದು, ತನಿಷ್ಕಾ ಮದುವೆಯಾಗಿರುವುದಲ್ಲದೆ ಗರ್ಭಿಣಿಯಾಗಿರುವುದು ಕೂಡ ತಿಳಿದುಬಂದಿದೆ. ಸುಮಾರು 8 ತಿಂಗಳ ಬಳಿಕ ಪತ್ತೆಯಾದ ಇಬ್ಬರು ಯುವತಿಯರನ್ನು ಸಿಐಡಿ ಅಧಿಕಾರಿಗಳು ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.
ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಿದ್ದರೂ, ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾದ ಸಂದರ್ಭದಿಂದ ಪತ್ತೆಯಾಗುವವರೆಗಿನ ಸಂಪೂರ್ಣ ಘಟನೆಗಳ ಕುರಿತು ತನಿಖೆ ಮುಂದುವರಿಯಲಿದೆ.
