ಮುಂಡರಗಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಮುಂಡರಗಿ ಪೊಲೀಸರು ಕ್ಯಾಂಟರ್ ಲಾರಿಯನ್ನು ವಶಕ್ಕೆ ಪಡೆದು, ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೆಪ್ಟೆಂಬರ್ 2ರಂದು ಬೆಳಗ್ಗೆ ಸುಮಾರು 7.30ರ ವೇಳೆಗೆ ಮುಂಡರಗಿ–ಕೊರ್ಲಹಳ್ಳಿ ರಸ್ತೆಯ ಮಕ್ತುಂಪುರ ಗ್ರಾಮದ ದುರ್ಗಮ್ಮ ದೇವಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಸಾರ್ವಜನಿಕರೊಬ್ಬರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.
200 ಕ್ವಿಂಟಲ್ ಅಕ್ಕಿ ಪತ್ತೆಪೊಲೀಸರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಆಹಾರ ನಿರೀಕ್ಷಕ ನಾಗನಗೌಡ ರುದ್ರಗೌಡ ಚಿನ್ನಪ್ಪಗೌಡ ಅವರು ಕ್ಯಾಂಟರ್ ಲಾರಿಯನ್ನು ಪರಿಶೀಲಿಸಿದಾಗ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಬಾಯಿಕಟ್ಟಿದ್ದ ಅಪಾರ ಪ್ರಮಾಣದ ಅಕ್ಕಿ ಪತ್ತೆಯಾಗಿದೆ. ಪರಿಶೀಲನೆಯ ವೇಳೆ ಅಕ್ಕಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಪಡಿತರ ಅಕ್ಕಿ ಎಂದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ
.ಲಾರಿಯಲ್ಲಿ ಸುಮಾರು 380ರಿಂದ 400 ಚೀಲಗಳಷ್ಟು ಅಕ್ಕಿ ಇದ್ದು, ಪ್ರತಿ ಚೀಲ ಸುಮಾರು 45ರಿಂದ 50 ಕೆ.ಜಿ. ತೂಕ ಹೊಂದಿತ್ತು ಎನ್ನಲಾಗಿದೆ. ಒಟ್ಟು ಸುಮಾರು 200 ಕ್ವಿಂಟಲ್ ಅಕ್ಕಿ ಇದ್ದು, ಪ್ರತಿ ಕ್ವಿಂಟಲ್ಗೆ ₹2,200ರಂತೆ ಅಂದಾಜಿಸಿದರೆ ಅಕ್ಕಿಯ ಮೌಲ್ಯ ಸುಮಾರು ₹4.40 ಲಕ್ಷ ಎಂದು ಲೆಕ್ಕ ಹಾಕಲಾಗಿದೆ.
ದಾಖಲೆಗಳಿಲ್ಲದೆ ಸಾಗಾಟ?ಅಕ್ಕಿ ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಾರಿಯಲ್ಲಿ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಲಾರಿ ಚಾಲಕನ ವಿಚಾರಣೆ ವೇಳೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದುದಾಗಿ ಹೇಳಿಕೆ ನೀಡಿದ್ದಾನೆ ಎಂದು ಆಹಾರ ನಿರೀಕ್ಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೂವರ ವಿರುದ್ಧ ಪ್ರಕರಣಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಸಪ್ಪ ವೀರುಪಣ್ಣ ಕಮತರ (40), ವೀರೇಶ ಬಡಿಗೇರ ಹಾಗೂ ಬೂದಪ್ಪ ಕುರಿ ಅವರನ್ನು ಆರೋಪಿಗಳೆಂದು ದಾಖಲಿಸಲಾಗಿದೆ
.ಮುಂಡರಗಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 179/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಗತ್ಯ ಸರಕುಗಳ ಕಾಯ್ದೆ–1955ರ ಕಲಂ 3 ಮತ್ತು 7 ಹಾಗೂ ಪಿಡಿಎಸ್ ನಿಯಂತ್ರಣ ಆದೇಶದ ಕಲಂ 18 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
₹10.40 ಲಕ್ಷ ಮೌಲ್ಯದ ವಸ್ತು ವಶಪೊಲೀಸರು ಸುಮಾರು ₹4.40 ಲಕ್ಷ ಮೌಲ್ಯದ 200 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ ಸುಮಾರು ₹6 ಲಕ್ಷ ಮೌಲ್ಯದ ಕ್ಯಾಂಟರ್ ಲಾರಿ ಸೇರಿ ಒಟ್ಟು ಅಂದಾಜು ₹10.40 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ
.ಪಡಿತರ ಅಕ್ಕಿ ಎಲ್ಲಿಂದ ಸಂಗ್ರಹಿಸಲಾಗಿತ್ತು, ಎಲ್ಲಿಗೆ ಸಾಗಿಸಲಾಗುತ್ತಿತ್ತು ಮತ್ತು ಈ ಅಕ್ರಮ ಸಾಗಾಟದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
