ಗದಗ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳ ನೇಮಕಾತಿಯಲ್ಲಿ ಸರ್ಕಾರದ ಆದೇಶದಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಭೀಮ ಶಕ್ತಿ ಸಂಘಟನೆಯ ವತಿಯಿಂದ ಗದಗ ಉಪ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಮನವಿಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಕಇ 515 ಪಕವಿ 2026, ದಿನಾಂಕ 08-05-2026 ಅನ್ನು ಉಲ್ಲೇಖಿಸಲಾಗಿದೆ. 2026ರ ಏಪ್ರಿಲ್ 30ರಂದು ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಹೊರಡಿಸಲಾದ ಈ ಆದೇಶದಲ್ಲಿ, ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳು ಹಾಗೂ ರಾಜ್ಯಾಧೀನ ಸೇವೆಗಳ ನೇರ ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಅದೇ ರೀತಿ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 200448/2025ರಲ್ಲಿ ನೀಡಿರುವ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ಸರ್ಕಾರವು 20-06-1995ರ ಸರ್ಕಾರದ ಆದೇಶದ ಅನ್ವಯ ತಾತ್ಕಾಲಿಕವಾಗಿ ಶೇ.50 ಮೀಸಲಾತಿ ವ್ಯವಸ್ಥೆಯನ್ನು ಅನುಸರಿಸಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದೆ.
ಅದರಂತೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಶೇ.15 ಮೀಸಲಾತಿಯಲ್ಲಿ ಪ್ರವರ್ಗ-ಎಗೆ ಶೇ.5.25, ಪ್ರವರ್ಗ-ಬಿಗೆ ಶೇ.5.25 ಹಾಗೂ ಪ್ರವರ್ಗ-ಸಿಗೆ ಶೇ.4.50ರಂತೆ ಒಳಮೀಸಲಾತಿ ಅನ್ವಯಿಸಬೇಕು ಎಂದು ಸರ್ಕಾರ ಆದೇಶಿಸಿದೆ.ಇದಲ್ಲದೆ, ಪ್ರವರ್ಗ-ಸಿಗೆ ಲಭ್ಯವಾಗುವ ಹುದ್ದೆಗಳ ಪೈಕಿ ಶೇ.20ರಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿಯ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿಡಬೇಕು. ಅಂತಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಮಾತ್ರ ಆ ಹುದ್ದೆಗಳನ್ನು ಪ್ರವರ್ಗ-ಸಿ ಯ ಇತರ ಜಾತಿಗಳಿಗೆ ನೀಡಬಹುದೆಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ
.ಮನವಿಯಲ್ಲಿ ಮತ್ತಷ್ಟು ಉಲ್ಲೇಖಿಸಿರುವಂತೆ, ಸರ್ಕಾರದ ಆದೇಶದ ಪ್ರಕಾರ ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚು ಹುದ್ದೆಗಳು ಮೀಸಲಾಗಿದ್ದಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಸ್ಪಷ್ಟ ನಿರ್ದೇಶನವಿದೆ
.ಆದರೆ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಗೆ ಸಂಬಂಧಿಸಿದಂತೆ 2026ರ ಜೂನ್ 22ರಂದು ಪ್ರಕಟಿಸಿರುವ ಅಧಿಸೂಚನೆಯಲ್ಲಿ ಸರ್ಕಾರದ ಒಳಮೀಸಲಾತಿ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ಭೀಮ ಶಕ್ತಿ ಸಂಘಟನೆ ಆರೋಪಿಸಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು 2026ರ ಜುಲೈ 30 ಕೊನೆಯ ದಿನಾಂಕವಾಗಿದ್ದು, ಪರಿಶಿಷ್ಟ ಜಾತಿಗೆ ಮೂರುಕ್ಕಿಂತ ಹೆಚ್ಚು ಹುದ್ದೆಗಳು ಮೀಸಲಾಗಿರುವುದರಿಂದ ಕಡ್ಡಾಯವಾಗಿ ಒಳಮೀಸಲಾತಿ ಜಾರಿಗೊಳಿಸಬೇಕಾಗಿತ್ತು ಎಂದು ಸಂಘಟನೆ ತಿಳಿಸಿದೆ.
ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಅದನ್ನು ಪಾಲಿಸದೇ ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವುದು ಸಾಮಾಜಿಕ ನ್ಯಾಯದ ತತ್ವ ಹಾಗೂ ಕಾನೂನಿನ ಉದ್ದೇಶಕ್ಕೆ ವಿರುದ್ಧವಾಗಿದೆ. ಇದರಿಂದ ಪರಿಶಿಷ್ಟ ಜಾತಿಯ ವಿವಿಧ ಉಪವರ್ಗಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.ಆದ್ದರಿಂದ, ಈಗಾಗಲೇ ಪ್ರಕಟಿಸಿರುವ ನೇಮಕಾತಿ ಅಧಿಸೂಚನೆಯನ್ನು ರದ್ದುಪಡಿಸಿ, ಸರ್ಕಾರದ ಆದೇಶ ಹಾಗೂ ಒಳಮೀಸಲಾತಿ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಿ ಹೊಸ ಅಧಿಸೂಚನೆ ಹೊರಡಿಸಿ ನೇಮಕಾತಿ ನಡೆಸುವಂತೆ ಸಂಘಟನೆ ಒತ್ತಾಯಿಸಿದೆ
.ಒಂದು ವೇಳೆ ಸರ್ಕಾರದ ಆದೇಶವನ್ನು ಕಡೆಗಣಿಸಿ ಪ್ರಸ್ತುತ ಅಧಿಸೂಚನೆಯ ಆಧಾರದ ಮೇಲೆ ನೇಮಕಾತಿ ಮುಂದುವರಿಸಿದಲ್ಲಿ, ನ್ಯಾಯಾಲಯದ ಮೊರೆ ಹೋಗುವುದರ ಜೊತೆಗೆ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಭೀಮ ಶಕ್ತಿ ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಭೀಮ ಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ ಮುಗುಳಿ, ರಾಜ್ಯ ಕಾನೂನು ಸಲಹೆಗಾರ ಮೈಲಾರಪ್ಪ ಡಿ.ಎಚ್., ಅಣ್ಣಪ್ಪ ಗುತ್ತೆಮ್ಮನವರ, ಅನಿಲ ಸಣ್ಣತಂಗಿಯವರ, ಪ್ರವೀಣ ಅದರಗುಂಚಿ, ಶ್ಯಾಮಸುಂದರ, ಮನು ತುರಾಡಿ, ಸೋಮಣ್ಣ ಸೇರಿದಂತೆ ಹಲವಾರು ಹೋರಾಟಗಾರರು ಉಪಸ್ಥಿತರಿದ್ದರು.
