ಗದಗ, ಸೆ.26: ಗದಗ-ಬೆಟಗೇರಿ ನಗರಸಭೆಯ ವಾರ್ಡ್ ನಂ.16ರ ವ್ಯಾಪ್ತಿಯ ಹೊಂಬಳನಾಕಾ ಜನತಾ ಕಾಲೋನಿ ನಿವಾಸಿಗಳು ಕಳೆದ ಸುಮಾರು ನಾಲ್ಕು ದಶಕಗಳಿಂದ ಎದುರಿಸುತ್ತಿದ್ದ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಗೆ ಇದೀಗ ಹಂತ ಹಂತವಾಗಿ ಪರಿಹಾರದ ದಾರಿ ತೆರೆದುಕೊಂಡಿದೆ.
ಕಾಲೋನಿ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಹಿರಿಯ ಸದಸ್ಯರಾದ ಕೃಷ್ಣಾ ಪರಾಪೂರ ಅವರು ಚಾಲನೆ ನೀಡಿದ್ದು, ಈಗಾಗಲೇ ಎರಡನೇ ಲೈನ್ನ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಮೂರನೇ ಲೈನ್ನ ರಸ್ತೆ ಕಾಮಗಾರಿಯೂ ಮುಕ್ತಾಯದ ಹಂತದಲ್ಲಿದೆ.
ಬಡಾವಣೆಯ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘವು ನಿರಂತರವಾಗಿ ಮನವಿ ಸಲ್ಲಿಸುತ್ತಾ ಬಂದಿದ್ದು, ಸಂಘದ ಪ್ರಯತ್ನಕ್ಕೆ ಸ್ಪಂದಿಸಿರುವ ಕೃಷ್ಣಾ ಪರಾಪೂರ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ ನೀಡಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ನಿರ್ಮಾಣದಿಂದ ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದ ನಿವಾಸಿಗಳಿಗೆ ಸಂಚಾರಕ್ಕೆ ಅನುಕೂಲವಾಗುವ ನಿರೀಕ್ಷೆ ಮೂಡಿದ್ದು, ಕಾಮಗಾರಿ ಆರಂಭಗೊಂಡಿರುವುದಕ್ಕೆ ಸಂಘ ಹಾಗೂ ಸ್ಥಳೀಯ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ, ಉಪಾಧ್ಯಕ್ಷ ಶರಣಪ್ಪ ಸೂಡಿ, ಕಾರ್ಯಾಧ್ಯಕ್ಷ ಪರಶುರಾಮ ಅಣ್ಣಿಗೇರಿ, ಸಂಚಾಲಕ ಗಂಗಾಧರ ಬ್ಯಾಗೋಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಬಡಾವಣೆಯ ನಿವಾಸಿಗಳ ಪರವಾಗಿ ಕೃಷ್ಣಾ ಪರಾಪೂರ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಉಳಿದ ನಾಲ್ಕು ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಮನವಿ
ರಸ್ತೆ ಕಾಮಗಾರಿಯ ಜೊತೆಗೆ ಬಡಾವಣೆಯಲ್ಲಿ ಇನ್ನೂ ಹಲವು ಮೂಲಭೂತ ಸಮಸ್ಯೆಗಳು ಬಾಕಿ ಉಳಿದಿವೆ ಎಂದು ಸಂಘದ ಪದಾಧಿಕಾರಿಗಳು ಗಮನ ಸೆಳೆದಿದ್ದಾರೆ.
ಕಳೆದ ಸುಮಾರು 40 ವರ್ಷಗಳಿಂದ ಸಮರ್ಪಕ ರಸ್ತೆ ಸಂಪರ್ಕದ ಕೊರತೆ, ಒಳಚರಂಡಿ ವ್ಯವಸ್ಥೆಯ ಅಭಾವ, ಸಾರ್ವಜನಿಕ ಹೈಟೆಕ್ ಶೌಚಾಲಯದ ಅಗತ್ಯ ಹಾಗೂ ಮಳೆನೀರು ಸರಾಗವಾಗಿ ಹರಿದುಹೋಗಲು ಸುಸಜ್ಜಿತ ರಾಜಕಾಲುವೆ ನಿರ್ಮಾಣದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಈ ನಾಲ್ಕೂ ಪ್ರಮುಖ ಸಮಸ್ಯೆಗಳಿಗೆ ಆದ್ಯತೆ ನೀಡಿ ಶಾಶ್ವತ ಪರಿಹಾರ ಕಲ್ಪಿಸುವಂತೆ ನಗರಸಭೆಯ ಹಿರಿಯ ಸದಸ್ಯರಾದ ಕೃಷ್ಣಾ ಪರಾಪೂರ ಅವರಿಗೆ ಸಂಘದ ವತಿಯಿಂದ ವಿನಮ್ರ ಮನವಿ ಮಾಡಲಾಗಿದೆ.
ಕಾಲೋನಿಯ ಸಮಗ್ರ ಅಭಿವೃದ್ಧಿಗೆ ರಸ್ತೆ ಮಾತ್ರವಲ್ಲದೆ ಒಳಚರಂಡಿ, ಸಾರ್ವಜನಿಕ ಶೌಚಾಲಯ ಹಾಗೂ ರಾಜಕಾಲುವೆ ವ್ಯವಸ್ಥೆಯೂ ಅಗತ್ಯವಾಗಿದ್ದು, ಈ ಕಾಮಗಾರಿಗಳು ಪೂರ್ಣಗೊಂಡಲ್ಲಿ ಬಡಾವಣೆಯ ನಿವಾಸಿಗಳಿಗೆ ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ತಿಳಿಸಿದ್ದಾರೆ.
ನಮ್ಮ ಬಡಾವಣೆಯ ನಿವಾಸಿಗಳು ರಸ್ತೆ ನಿರ್ಮಾಣದ ಕೊರತೆಯಿಂದ ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದರು. ನಮ್ಮ ಸಂಘದ ಸತತ ಪ್ರಯತ್ನಕ್ಕೆ ಸ್ಪಂದಿಸಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಆದ್ಯತೆ ನೀಡಿರುವ ನಗರಸಭೆಯ ಹಿರಿಯ ಸದಸ್ಯರಾದ ಕೃಷ್ಣಾ ಪರಾಪೂರ ಅವರ ಜನಪರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ
.ಇನ್ನೂ ಬಾಕಿ ಇರುವ ರಸ್ತೆ ಸಂಪರ್ಕ, ಒಳಚರಂಡಿ, ಹೈಟೆಕ್ ಶೌಚಾಲಯ ಹಾಗೂ ರಾಜಕಾಲುವೆ ನಿರ್ಮಾಣದ ಸಮಸ್ಯೆಗಳಿಗೂ ಆದ್ಯತೆ ನೀಡಿ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡುತ್ತೇವೆ.”
ಕೃಷ್ಣಾ ಎಚ್. ಹಡಪದ
ಅಧ್ಯಕ್ಷರು, ಹೊಂಬಳನಾಕಾ ಜನತಾ ಕಾಲೋನಿ
ಅಭಿವೃದ್ಧಿಪರ ಸೇವಾ ಸಂಘ, ಗದಗ.
