ಗದಗ: ಶಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಾಲಯ ಆದೇಶಿಸಿದ್ದ ಹೆಚ್ಚುವರಿ ಪರಿಹಾರವನ್ನು ಪಾವತಿಸುವಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತಕ್ಕೆ ನ್ಯಾಯಾಲಯದಿಂದ ಮತ್ತೊಮ್ಮೆ ಕಠಿಣ ಸೂಚನೆ ಎದುರಾಗಿದೆ.
ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಅವರ ಅಧಿಕೃತ ವಾಹನಗಳು ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಹಲವು ಪರಿಕರಗಳನ್ನು ಜಪ್ತಿ ಮಾಡುವ ಕ್ರಮ ಕೈಗೊಳ್ಳಲಾಗಿದೆ.ಮುಂಡರಗಿ ತಾಲೂಕಿನ ಮೇವುಂಡಿ ಹಾಗೂ ಬರದೂರು ಗ್ರಾಮದ 17 ರೈತರಿಗೆ ಹೆಚ್ಚುವರಿ ಪರಿಹಾರ ನೀಡಬೇಕಿರುವ ಪ್ರಕರಣ ಇದಾಗಿದೆ
. ರೈತರು 2017ರಿಂದಲೂ ನ್ಯಾಯಯುತ ಪರಿಹಾರಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದು, 2024ರಲ್ಲಿ ಎಕರೆಗೆ ₹30 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು ಎಂದು ರೈತರ ಪರದ ಮಾಹಿತಿ ತಿಳಿಸಿದೆ. ಆದರೆ, ಆದೇಶ ಹೊರಬಂದು ಹಲವು ತಿಂಗಳು ಕಳೆದರೂ ಪರಿಹಾರ ಮೊತ್ತ ಪಾವತಿಯಾಗಿಲ್ಲ ಎಂಬುದು ರೈತರ ಅಳಲು
.ಪರಿಹಾರ ಪಾವತಿಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಅವರ ಅಧಿಕೃತ ಕಾರುಗಳ ಜೊತೆಗೆ ಜಿಲ್ಲಾಧಿಕಾರಿ ಕಚೇರಿಯ 8 ಲ್ಯಾಪ್ಟಾಪ್ಗಳು, 3 ಸಿಪಿಯುಗಳು ಹಾಗೂ 1 ಪ್ರಿಂಟರ್ಗಳನ್ನು ವಶಕ್ಕೆ ಪಡೆಯುವ ಕ್ರಮ ನಡೆದಿದೆ ಎಂದು ತಿಳಿದುಬಂದಿದೆ.
ಎರಡು ತಿಂಗಳ ಅಂತರದಲ್ಲಿ ಮತ್ತೊಮ್ಮೆ ಜಪ್ತಿ ಕ್ರಮಜಿಲ್ಲಾಧಿಕಾರಿ ಅವರ ಅಧಿಕೃತ ಕಾರನ್ನು ಜಪ್ತಿ ಮಾಡುವಂತೆ ಆದೇಶ ಹೊರಬಂದಿರುವುದು ಇತ್ತೀಚಿನ ಅವಧಿಯಲ್ಲಿ ಎರಡನೇ ಬಾರಿ ಎಂದು ಹೇಳಲಾಗಿದೆ. ಕಳೆದ ಆಗಸ್ಟ್ 14ರಂದು ಕೂಡ ರೈತರ ಪರವಾಗಿ ಡಿಸಿ ಕಾರು ಜಪ್ತಿಗೆ ಆದೇಶ ಬಂದಿತ್ತು.
ಆ ಸಂದರ್ಭದಲ್ಲಿ ಜಿಲ್ಲಾಡಳಿತವು ಪರಿಹಾರ ಪಾವತಿಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಾಹನವನ್ನು ವಾಪಸ್ ಪಡೆಯಲಾಗಿತ್ತು ಎನ್ನಲಾಗಿದೆ.ಆದರೆ, ನೀಡಲಾಗಿದ್ದ ಭರವಸೆಯಂತೆ ಪರಿಹಾರ ಪಾವತಿ ಆಗದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ನ್ಯಾಯಾಲಯದ ಆದೇಶ ಜಾರಿಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಕರೆಗೆ ₹50 ಸಾವಿರದಿಂದ ₹30 ಲಕ್ಷದವರೆಗೆ ಹೋರಾಟ
ಶಿಂಗಟಾಲೂರು ಏತ ನೀರಾವರಿ ಯೋಜನೆ ಆರಂಭದ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರದಿಂದ ಎಕರೆಗೆ ₹50 ಸಾವಿರ ಪರಿಹಾರ ನಿಗದಿಪಡಿಸಲಾಗಿತ್ತು ಎಂದು ರೈತರು ತಿಳಿಸಿದ್ದಾರೆ. ಪರಿಹಾರದ ಮೊತ್ತ ತಮಗೆ ನ್ಯಾಯಸಮ್ಮತವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು
.ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ 2024ರಲ್ಲಿ ಎಕರೆಗೆ ₹30 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ರೈತರ ಪರ ವಕೀಲರು ಹಾಗೂ ರೈತರು ತಿಳಿಸಿದ್ದಾರೆ. ಆದರೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ಹಣ ಪಾವತಿಯಾಗದಿರುವುದು ಇದೀಗ ಮತ್ತೊಂದು ಹಂತದ ನ್ಯಾಯಾಂಗ ಕ್ರಮಕ್ಕೆ ಕಾರಣವಾಗಿದೆ.
