ಗದಗ, ಸೆ. 4: ಪ್ರತಿವರ್ಷ ವಿಜಯದಶಮಿಯಂದು ದುಷ್ಟಶಕ್ತಿಯ ಸಂಕೇತವಾಗಿ ತ್ರೇತಾಯುಗದ ರಾವಣನ ಪ್ರತಿಕೃತಿಯನ್ನು ದಹಿಸುವುದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ
. ಆದರೆ, ಇಂದಿನ ಸಮಾಜದಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಅಮಾಯಕರ ಮೇಲೆ ಅತ್ಯಾಚಾರ, ದೌರ್ಜನ್ಯ ಮತ್ತು ಹತ್ಯೆಯಂತಹ ಗಂಭೀರ ಅಪರಾಧಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಅಪರಾಧಗಳಿಗೆ ಕಡಿವಾಣ ಹಾಕಲು ಮತ್ತಷ್ಟು ಪರಿಣಾಮಕಾರಿ ಕಾನೂನು ಮತ್ತು ತ್ವರಿತ ನ್ಯಾಯ ವ್ಯವಸ್ಥೆಯ ಅಗತ್ಯವಿದೆ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಗದಗ ನಗರಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಭೇಟಿಯಾದ ಕೃಷ್ಣಾ ಎಚ್. ಹಡಪದ ಅವರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ಕಠಿಣ ಕಾನೂನು ಜಾರಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿ ಮನವಿ ಪತ್ರ ಸಲ್ಲಿಸಿದರು.
ಮನವಿಯ ಪ್ರಮುಖ ಅಂಶಗಳು1. ಅತ್ಯಾಚಾರ ಮತ್ತು ಮಹಿಳಾ–ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ತ್ವರಿತ ನ್ಯಾಯ:ದೇಶದಲ್ಲಿ ಈಗಾಗಲೇ ಅತ್ಯಾಚಾರ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕಠಿಣ ಕಾನೂನುಗಳಿದ್ದರೂ, ಪ್ರಕರಣಗಳ ವಿಚಾರಣೆ ಮತ್ತು ನ್ಯಾಯದಾನದಲ್ಲಿ ವಿಳಂಬವಾಗುತ್ತಿರುವುದು ಅಪರಾಧಿಗಳಿಗೆ ಭಯ ಕಡಿಮೆಯಾಗಲು ಕಾರಣವಾಗುತ್ತಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇಂತಹ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ವಿಶೇಷ ಫಾಸ್ಟ್ಟ್ರ್ಯಾಕ್ ನ್ಯಾಯಾಲಯಗಳ ಪರಿಣಾಮಕಾರಿ ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಅಪರಾಧ ಸಾಬೀತಾದ ಪ್ರಕರಣಗಳಲ್ಲಿ ಕಾನೂನಿನ ಚೌಕಟ್ಟಿನೊಳಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ವ್ಯವಸ್ಥೆ ಇರಬೇಕು. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಗಂಭೀರ ಅಪರಾಧಗಳಿಗೆ ಯಾವುದೇ ರೀತಿಯ ರಾಜಿ ಅಥವಾ ವಿಳಂಬಕ್ಕೆ ಅವಕಾಶ ಇರಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ
.2. ದಸರಾ ಆಚರಣೆಗೆ ಸಾಮಾಜಿಕ ಜಾಗೃತಿಯ ಆಯಾಮ:ಮುಂದಿನ ದಸರಾ ಮಹೋತ್ಸವಗಳಲ್ಲಿ ರಾವಣನ ಪ್ರತಿಕೃತಿಯ ದಹನದೊಂದಿಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ವಿಕೃತ ಮನಸ್ಥಿತಿಗಳ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಬ್ಬದ ಆಚರಣೆಯನ್ನು ಸಾಮಾಜಿಕ ಸಂದೇಶದೊಂದಿಗೆ ಜೋಡಿಸುವ ಮೂಲಕ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಗೌರವದ ಕುರಿತು ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದ್ದಾರೆ.
3. ಶಾಲಾ–ಕಾಲೇಜುಗಳಲ್ಲಿ ಮಹಿಳಾ ಸುರಕ್ಷತೆ ಕುರಿತು ಜಾಗೃತಿ:ರಾಜ್ಯದ ದಸರಾ ಸಮಿತಿಗಳ ಕಾರ್ಯಕ್ರಮಗಳು ಹಾಗೂ ಶಾಲಾ–ಕಾಲೇಜುಗಳ ಪ್ರಾರ್ಥನಾ ಸಭೆಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆ, ಗೌರವ, ಸಮಾನತೆ ಮತ್ತು ಕಾನೂನು ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳು ಭಯವಿಲ್ಲದೆ ಬದುಕುವಂತಹ ಸುರಕ್ಷಿತ ವಾತಾವರಣ ನಿರ್ಮಾಣವಾಗಬೇಕು. ಸಮಾಜದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಗಂಭೀರ ಅಪರಾಧಗಳ ವಿರುದ್ಧ ಸರ್ಕಾರ ಕಠಿಣ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಕೇವಲ ಹಬ್ಬಗಳನ್ನು ಆಚರಿಸುವುದಕ್ಕಿಂತ ಸಮಾಜದಲ್ಲಿರುವ ದುಷ್ಟ ಪ್ರವೃತ್ತಿಗಳ ವಿರುದ್ಧ ಹೋರಾಡುವ ಮನೋಭಾವ ಬೆಳೆಸುವುದು ಇಂದಿನ ಅಗತ್ಯವಾಗಿದೆ
ಎಂದು ಕೃಷ್ಣಾ ಎಚ್. ಹಡಪದ ತಿಳಿಸಿದ್ದಾರೆ.ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಅಗತ್ಯವಿರುವ ಕಾನೂನು ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ
.ಈ ಸಂದರ್ಭದಲ್ಲಿ ಹಿರಿಯರಾದ ಹನುಮಂತಪ್ಪ ರಾಂಪೂರ, ಸಮಾಜದ ಪ್ರಮುಖರಾದ ವಿಕಾಸ್ ಕ್ಷೀರಸಾಗರ, ಮಂಜುನಾಥ ಮಾನೆ, ಅರೂಣ ರಾಂಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು
.ಕೃಷ್ಣಾ ಎಚ್. ಹಡಪದಜಿಲ್ಲಾಧ್ಯಕ್ಷರು, ಗದಗ ಜಿಲ್ಲಾ ಸವಿತಾ ಸಮಾಜ
ಸಾಮಾಜಿಕ ಕಾರ್ಯಕರ್ತರು
