ಗದಗ, ಆಗಸ್ಟ್ 23: ರಸ್ತೆ ಅಂದರೆ ಊರಿನ ಕಣ್ಣು ಇದ್ದಂತೆ. ಆದರೆ ಗದಗ ನಗರದ ವಾರ್ಡ್ ನಂ.33ರ ಸೂರ್ಯನಗರದ ಮುಖ್ಯ ರಸ್ತೆ ಇಂದು ಹೊಲದ ಹಾದಿಗಿಂತಲೂ ಹದಗೆಟ್ಟ ಸ್ಥಿತಿಗೆ ತಲುಪಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ
.ಹೊಸ ಕೋರ್ಟ್ ಹಿಂಭಾಗದಲ್ಲಿರುವ ಈ ರಸ್ತೆಯ ದುಸ್ಥಿತಿಯಿಂದ ಸ್ಥಳೀಯರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ ಬಂದಾಗ ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದ್ದು, ರಸ್ತೆಯುದ್ದಕ್ಕೂ ನಿರ್ಮಾಣವಾಗಿರುವ ಗುಂಡಿಗಳು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ.
ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸಂಕಷ್ಟಶಾಲೆಗೆ ತೆರಳುವ ಮಕ್ಕಳು ಕೆಸರು ಮತ್ತು ಗುಂಡಿಗಳ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಸರಿನಲ್ಲಿ ಜಾರಿ ಬಿದ್ದು ಬಟ್ಟೆ ಹಾಳುಮಾಡಿಕೊಂಡು ಮಕ್ಕಳು ಮನೆಗೆ ಮರಳುವ ಘಟನೆಗಳೂ ನಡೆಯುತ್ತಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.ಹಿರಿಯರು, ಕೂಲಿ ಕಾರ್ಮಿಕರು ಹಾಗೂ ಮಹಿಳೆಯರು ಕೂಡ ಈ ರಸ್ತೆಯಲ್ಲಿ ಸಂಚರಿಸಲು ನಿತ್ಯ ಹರಸಾಹಸಪಡುತ್ತಿದ್ದಾರೆ.
ರಾತ್ರಿ ವೇಳೆ ರಸ್ತೆಯ ಸ್ಥಿತಿ ಮತ್ತಷ್ಟು ಅಪಾಯಕಾರಿಯಾಗಿದ್ದು, ಹಿರಿಯರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ ಎಂದು ಆರೋಪಿಸಲಾಗಿದೆ.ತುರ್ತು ಸಂದರ್ಭದಲ್ಲಿ ರಸ್ತೆ ಮತ್ತಷ್ಟು ಅಪಾಯಕಾರಿರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲೂ ಸಮಸ್ಯೆ ಎದುರಾಗುತ್ತಿದೆ.
ತುರ್ತು ಸಂದರ್ಭದಲ್ಲಿ ಆಟೋ ಹಾಗೂ ಇತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಹಿಂಜರಿಯುವ ಪರಿಸ್ಥಿತಿ ಇದೆ ಎಂದು ಕೃಷ್ಣಾ ಎಚ್. ಹಡಪದ ಅವರು ತಿಳಿಸಿದ್ದಾರೆ.“ಇದು ಕೇವಲ ರಸ್ತೆ ಸಮಸ್ಯೆಯಲ್ಲ; ಜನರ ಸುರಕ್ಷತೆ ಮತ್ತು ಆರೋಗ್ಯದ ಪ್ರಶ್ನೆ. ತುರ್ತು ಸಂದರ್ಭದಲ್ಲಿ ಒಂದು ವಾಹನ ಸಮಯಕ್ಕೆ ತಲುಪಲು ಸಾಧ್ಯವಾಗದಿದ್ದರೆ ಅದರ ಹೊಣೆ ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ನಗರಸಭೆಗೆ ಮನವಿಸೂರ್ಯನಗರದ ಮುಖ್ಯ ರಸ್ತೆಯನ್ನು ತಕ್ಷಣ ಪರಿಶೀಲಿಸಿ, ಗುಣಮಟ್ಟದ ಶಾಶ್ವತ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಹಾಗೂ ನಗರಸಭೆಯನ್ನು ಕೃಷ್ಣಾ ಎಚ್. ಹಡಪದ ಅವರು ಆಗ್ರಹಿಸಿದ್ದಾರೆ.
ಸಮಸ್ಯೆ ಬಗೆಹರಿಯದಿದ್ದರೆ ವಾರ್ಡ್ನ ಜನರು, ಶಾಲಾ ಮಕ್ಕಳು ಹಾಗೂ ಹಿರಿಯರನ್ನು ಒಗ್ಗೂಡಿಸಿ ತಮಟೆ ಬಾರಿಸುವ ಮೂಲಕ ನಗರಸಭೆ ಎದುರು ಜಾನಪದ ಶೈಲಿಯ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ
.“ಹೊಲದ ಹಾದಿಗಿಂತ ಕಡೆಯಾಗಿರುವ ರಸ್ತೆ ಯಾವಾಗ ಸರಿಯಾಗುತ್ತದೆ?
ಜನರ ನೋವಿಗೆ ಇನ್ನೆಷ್ಟು ದಿನ ಉತ್ತರ ಸಿಗದೆ ಇರಬೇಕು?” ಎಂಬುದು ಸೂರ್ಯನಗರದ ನಿವಾಸಿಗಳ ಪ್ರಶ್ನೆಯಾಗಿದೆ.
