ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಅವರು ಮಹಿಳಾ ಕೈದಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಆಲಿಸಿದರು.
ಮಹಿಳಾ ಕೈದಿಗಳ ಸುರಕ್ಷತೆ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳ ಲಭ್ಯತೆ ಕುರಿತು ಖುದ್ದಾಗಿ ಪರಿಶೀಲನೆ ನಡೆಸಿದ ಅವರು, ಕಾರಾಗೃಹದಲ್ಲಿನ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಕಾರಾಗೃಹದ ಅಡುಗೆಮನೆ, ಆಹಾರದ ಗುಣಮಟ್ಟ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವೈದ್ಯಕೀಯ ಹಾಗೂ ಮನೋವೈದ್ಯಕೀಯ ಸೇವೆಗಳು ಮತ್ತು ಮಕ್ಕಳ ಆರೈಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದರು
. ಮಹಿಳಾ ಕೈದಿಗಳು ಹಾಗೂ ಅವರೊಂದಿಗೆ ಇರುವ ಮಕ್ಕಳಿಗೆ ಅಗತ್ಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿವೆಯೇ ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಂಡರು.ಇದೇ ವೇಳೆ ಕಾರಾಗೃಹದಲ್ಲಿರುವ ಶಾಲೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಅವರು, ಮಹಿಳಾ ಕೈದಿಗಳು ಹಾಗೂ ಮಕ್ಕಳಿಗೆ ದೊರೆಯುತ್ತಿರುವ ಶಿಕ್ಷಣ, ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದರು.
ಸುರಿಟಿ ಸಮಸ್ಯೆಯಿಂದ ಜೈಲಿನಲ್ಲೇ ಉಳಿಯುವ ಕೈದಿಗಳ ಕುರಿತು ಗಮನಜಾಮೀನು ದೊರೆತಿದ್ದರೂ ಅಥವಾ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ಸುರಿಟಿ ನೀಡಲು ಸಾಧ್ಯವಾಗದ ಕಾರಣ ದೀರ್ಘಕಾಲ ಕಾರಾಗೃಹದಲ್ಲೇ ಉಳಿಯುತ್ತಿರುವ ಕೈದಿಗಳ ಸಮಸ್ಯೆಯನ್ನು ಡಾ. ನಾಗಲಕ್ಷ್ಮಿ ಅವರು ವಿಶೇಷವಾಗಿ ಗಮನಿಸಿದರು.
ವಿಶೇಷವಾಗಿ ವಿದೇಶಿ ಕೈದಿಗಳಿಗೆ ಎದುರಾಗುತ್ತಿರುವ ಕಾನೂನುಬದ್ಧ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸುರಿಟಿ ಅಥವಾ ಇತರ ಕಾನೂನು ಪ್ರಕ್ರಿಯೆಗಳ ಕಾರಣದಿಂದ ಬಿಡುಗಡೆ ವಿಳಂಬವಾಗುತ್ತಿರುವ ಪ್ರಕರಣಗಳಿಗೆ ಸೂಕ್ತ ಕಾನೂನುಬದ್ಧ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು
.ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು, ಅಗತ್ಯ ಕ್ರಮಗಳ ಕುರಿತು ಚರ್ಚಿಸುವುದಾಗಿ ಡಾ. ನಾಗಲಕ್ಷ್ಮಿ ತಿಳಿಸಿದ್ದಾರೆ.
ಮಹಿಳಾ ಕೈದಿಗಳ ಮಾನವೀಯ ಹಕ್ಕುಗಳು, ಆರೋಗ್ಯ, ಸುರಕ್ಷತೆ ಮತ್ತು ಪುನರ್ವಸತಿಗೆ ಅಗತ್ಯವಿರುವ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಇಂತಹ ಪರಿಶೀಲನಾ ಭೇಟಿಗಳು ಮಹತ್ವ ಪಡೆದುಕೊಂಡಿವೆ.
