ಭೋಪಾಲ್: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಆಧಾರರಹಿತ ವಿಡಿಯೋ ಹಾಗೂ ರೀಲ್ಸ್ಗಳನ್ನು ನಂಬಿ ಸುಲಭವಾಗಿ ಕೋಟ್ಯಧಿಪತಿಯಾಗುವ ಕನಸು ಕಂಡ ಯುವಕರ ಗ್ಯಾಂಗ್ವೊಂದು 17 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ಬೆಳಕಿಗೆ ಬಂದಿದೆ.
ಫುಟ್ಪಾತ್ನಲ್ಲಿ ಪೆನ್ನು ಮತ್ತು ಕೀ-ಚೈನ್ಗಳನ್ನು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಬಡ ಕುಟುಂಬದ ರೆಹಾನ್ (17) ಆಗಸ್ಟ್ 6ರಂದು ನಾಪತ್ತೆಯಾಗಿದ್ದ. ಬಳಿಕ ಆಗಸ್ಟ್ 11ರಂದು ನಗರದ ಛೋಟಾ ತಲಾಬ್ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಆಗಸ್ಟ್ 14ರಂದು ಮೃತನ ಬಟ್ಟೆ, ಕೈ ಮೇಲಿನ ಟ್ಯಾಟೂ ಹಾಗೂ ಚಪ್ಪಲಿಗಳನ್ನು ಆಧರಿಸಿ ಕುಟುಂಬಸ್ಥರು ಶವ ರೆಹಾನ್ನದ್ದೆಂದು ಗುರುತಿಸಿದ್ದಾರೆ
.₹6 ಕೋಟಿಯ ಸುಳ್ಳು ವದಂತಿಪ್ರಕರಣದ ತನಿಖೆ ನಡೆಸಿದ ಪೊಲೀಸರು ಸುಮಾರು 13 ಮಂದಿ ಶಂಕಿತರನ್ನು ವಿಚಾರಣೆ ನಡೆಸಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಗಲ್ಫ್ ದೇಶಗಳಲ್ಲಿ ಪುರುಷರ ವೃಷಣಗಳಿಗೆ ಕೋಟ್ಯಂತರ ರೂಪಾಯಿ ಬೆಲೆ ಇದೆ ಎಂಬ ಸುಳ್ಳು ಮಾಹಿತಿಯನ್ನು ಆರೋಪಿಗಳು ನಂಬಿದ್ದರು ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ಬಿಬಿಎ ವಿದ್ಯಾರ್ಥಿ ಜೋಹೆಬ್ ಹಾಗೂ ಆತನ ಸಹಚರರು ಈ ಸುಳ್ಳು ಮಾಹಿತಿಯನ್ನು ನಂಬಿ, ರೆಹಾನ್ಗೆ ₹2 ಕೋಟಿ ಹಣ ನೀಡುವುದಾಗಿ ಆಮಿಷವೊಡ್ಡಿ ಆತನನ್ನು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.ಆ ಬಳಿಕ ಬಾಲಕನನ್ನು ಹತ್ಯೆ ಮಾಡಿ, ಮೃತದೇಹದಿಂದ ದೇಹದ ಭಾಗವನ್ನು ತೆಗೆದು ಮಾರಾಟ ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಆದರೆ ಅದನ್ನು ಖರೀದಿಸಲು ಯಾರೂ ಸಿಗದ ಹಿನ್ನೆಲೆಯಲ್ಲಿ ಆರೋಪಿಗಳು ಮೃತದೇಹವನ್ನು ಕೆರೆಗೆ ಎಸೆದು ಪರಾರಿಯಾಗಿದ್ದರು ಎನ್ನಲಾಗಿದೆ.ಮರಣೋತ್ತರ ಪರೀಕ್ಷೆಯಲ್ಲಿಯೂ ಮೃತದೇಹದ ಒಂದು ಭಾಗ ನಾಪತ್ತೆಯಾಗಿರುವುದು ಪತ್ತೆಯಾಗಿದೆ ಎಂದು ತನಿಖಾ ಮಾಹಿತಿ ತಿಳಿಸಿದೆ.ಪ್ರಮುಖ ಆರೋಪಿಗಳು ಬಂಧನಪ್ರಕರಣದ ಪ್ರಮುಖ ಆರೋಪಿಗಳಾದ ಬಿಬಿಎ ವಿದ್ಯಾರ್ಥಿ ಜೋಹೆಬ್ ಹಾಗೂ ಆಮಿರ್ ಖುರೇಷಿ ಅವರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಸಹಕರಿಸಿದ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ
.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರತಿಯೊಂದು ವಿಡಿಯೋ ಅಥವಾ ರೀಲ್ಸ್ ಅನ್ನು ಸತ್ಯವೆಂದು ನಂಬಬಾರದು ಎಂಬುದಕ್ಕೆ ಈ ಘಟನೆ ಗಂಭೀರ ಎಚ್ಚರಿಕೆಯಾಗಿದೆ. ಸುಲಭವಾಗಿ ಹಣ ಗಳಿಸುವ ಆಸೆ ಮತ್ತು ಪರಿಶೀಲಿಸದ ಮಾಹಿತಿಯ ಮೇಲಿನ ಕುರುಡು ನಂಬಿಕೆ ಎಷ್ಟು ಭೀಕರ ಪರಿಣಾಮಕ್ಕೆ ಕಾರಣವಾಗಬಹುದು ಎಂಬುದನ್ನು ಈ ಪ್ರಕರಣ ತೋರಿಸಿದೆ.
ಅಧಿಕೃತ ತನಿಖೆ ಪೂರ್ಣಗೊಂಡು ನ್ಯಾಯಾಲಯದಲ್ಲಿ ಆರೋಪಗಳು ಸಾಬೀತಾಗುವವರೆಗೆ ಆರೋಪಿಗಳನ್ನು ಕಾನೂನುಬದ್ಧವಾಗಿ ಆರೋಪಿಗಳೆಂದೇ ಪರಿಗಣಿಸಬೇಕು.
