ಗದಗ, ಆಗಸ್ಟ್ 11: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ತಮ್ಮ ಕಾಲಿನ ಮೇಲೆ ನಿಂತಾಗ ಮಾತ್ರ ನಿಜವಾದ ಮಹಿಳಾ ಸಬಲೀಕರಣ ಸಾಧ್ಯ ಎಂದು ಗದಗ ಮಿಡ್ಟೌನ್ ವಿನ್ನರ್ ವಿಲ್ ಕ್ಲಬ್ನ ಮಾಜಿ ಅಧ್ಯಕ್ಷೆ ಪ್ರೀತಿ ಶಿವಪ್ಪನಮಠ ಹೇಳಿದರು.ನಗರದ ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ ಉಚಿತ ಸ್ವಉದ್ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಗೃಹಕೃತ್ಯಗಳ ಜೊತೆಗೆ ಸ್ವಉದ್ಯೋಗ ಹಾಗೂ ಸಣ್ಣ ಉದ್ಯಮಗಳ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕುಂತಲಾ ಮುಳುಗುಂದ ಅವರು, ಕಡಿಮೆ ಬಂಡವಾಳದಲ್ಲಿ ಮನೆಯಲ್ಲೇ ತಯಾರಿಸಬಹುದಾದ ವಿವಿಧ ಗೃಹ ಉತ್ಪನ್ನಗಳು, ಅವುಗಳ ಮಾರುಕಟ್ಟೆ ಹಾಗೂ ಸಣ್ಣ ಉದ್ಯಮವನ್ನು ದೊಡ್ಡ ವ್ಯಾಪಾರವನ್ನಾಗಿ ಬೆಳೆಸುವ ಕುರಿತು ಮಾಹಿತಿ ನೀಡಿದರು
.ಮುಖ್ಯ ತರಬೇತುದಾರರಾಗಿ ಭಾಗವಹಿಸಿದ್ದ ಸಿಡಾಕ್ (CEDOK) ಗದಗದ ತಜ್ಞ ಮಂಜುನಾಥ ಮುಳುಗುಂದ ಅವರು ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿ, ಸರ್ಕಾರದ ಸಬ್ಸಿಡಿ ಸಾಲ ಸೌಲಭ್ಯಗಳು, ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಮುದ್ರಾ ಸಾಲ ಯೋಜನೆಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಮಾನ್ವಿ ಹಾಗೂ ಸಿಲ್ಕ್ ಹೆರಿಟೇಜ್ನ ಪೂಜಿತ ಗಜಕೋಶ್ ಭಾಗವಹಿಸಿ ಮಹಿಳಾ ಸಬಲೀಕರಣದ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.
ಇದೇ ವೇಳೆ ಸ್ವಸಹಾಯ ಸಂಘದ ಮೂಲಕ ಸ್ವಾವಲಂಬನೆ ಸಾಧಿಸಿದ ರಾಜೇಶ್ವರಿ ದಾನಿ ಹಾಗೂ ಗೀತಾ ಬಂಡಿವಡ್ಡರ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ತರಬೇತಿ ಶಿಬಿರದಲ್ಲಿ ಗದಗ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ 40ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಸ್ವಉದ್ಯೋಗದ ಕುರಿತು ಪ್ರಾಯೋಗಿಕ ತರಬೇತಿ ಪಡೆದರು.ಕಾರ್ಯಕ್ರಮದಲ್ಲಿ ಲಕ್ಷ್ಮಿ ಕಮಿತ್ಕರ, ವಿಜಯಲಕ್ಷ್ಮಿ ಅಸೂಟಿ, ನಾಗರಾಜ್ ಗೌಡಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು
.“ಮಹಿಳೆಯರ ಆರ್ಥಿಕ ಸ್ವಾವಲಂಬನೆಯೇ ಬಲಿಷ್ಠ ಭಾರತದ ಶಕ್ತಿ. ಸರ್ಕಾರದ ಉಚಿತ ಕೌಶಲ್ಯ ತರಬೇತಿ ಹಾಗೂ ಮುದ್ರಾ ಸಾಲ ಸೇರಿದಂತೆ ವಿವಿಧ ಯೋಜನೆಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು.
ದಾರಿದೀಪ ಸಂಸ್ಥೆಯ ಈ ಪ್ರಯತ್ನವು ಮಹಿಳೆಯರಿಗೆ ಸ್ವಉದ್ಯೋಗದ ಹೊಸ ಅವಕಾಶಗಳನ್ನು ಕಲ್ಪಿಸಲಿದೆ.”— ಮಂಜುನಾಥ ಮುಳುಗುಂದ, ಸಿಡಾಕ್ ತಜ್ಞರು, ಗದಗ
ವರದಿ: ಕೃಷ್ಣ ಎಚ್. ಹಡಪದ
