ಬೆಂಗಳೂರು: ಕರ್ನಾಟಕದ ಆರ್ಥಿಕ ಅಭಿವೃದ್ಧಿ, ತಂತ್ರಜ್ಞಾನ ಹಾಗೂ ನವೋದ್ಯಮ ಕ್ಷೇತ್ರಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ, ಇಂದು ಬೆಂಗಳೂರಿನ ಖನಿಜ ಭವನದಲ್ಲಿ ಚೆನ್ನೈನ ಅಮೆರಿಕದ ಕಾನ್ಸುಲ್ ಜನರಲ್ ಶ್ರೀಮತಿ ಮರಿಯಾನಾ ಎಲ್. ನೈಸುಲರ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಾಯಿತು.
ಸಭೆಯಲ್ಲಿ ಕರ್ನಾಟಕ–ಅಮೆರಿಕ ನಡುವಿನ ಆರ್ಥಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ರಾಜ್ಯದಲ್ಲಿ ಹೆಚ್ಚಿನ ಅಮೆರಿಕನ್ ಹೂಡಿಕೆಗಳನ್ನು ಆಕರ್ಷಿಸುವ ಕುರಿತು ಚರ್ಚೆ ನಡೆಯಿತು.ವಿಶೇಷವಾಗಿ ಸೆಮಿಕಂಡಕ್ಟರ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಏರೋಸ್ಪೇಸ್ ಮತ್ತು ಡಿಫೆನ್ಸ್, ಎಲೆಕ್ಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ (AI), ಜೈವಿಕ ತಂತ್ರಜ್ಞಾನ ಹಾಗೂ ನವೋದ್ಯಮ ಆಧಾರಿತ ಹೂಡಿಕೆಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳ ಕುರಿತು ವಿಚಾರ ವಿನಿಮಯ ನಡೆಯಿತು.
ಪ್ರಸ್ತುತ ಕರ್ನಾಟಕದಲ್ಲಿ ಸುಮಾರು 700 ಅಮೆರಿಕದ ಕಂಪನಿಗಳು ಮತ್ತು ಸ್ಟಾರ್ಟ್ಅಪ್ಗಳು ಕಾರ್ಯನಿರ್ವಹಿಸುತ್ತಿದ್ದು, ಜಾಗತಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಸುಧಾರಿತ ಉತ್ಪಾದನಾ ಕ್ಷೇತ್ರಗಳಿಗೆ ಕರ್ನಾಟಕ ಪ್ರಮುಖ ತಾಣವಾಗಿ ಮುಂದುವರಿದಿದೆ
.ಭಾರತ ಮತ್ತು ಅಮೆರಿಕ 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 500 ಬಿಲಿಯನ್ ಅಮೆರಿಕನ್ ಡಾಲರ್ಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ‘ಮಿಷನ್ 500’ ಗುರಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ, ಈ ಬೆಳೆಯುತ್ತಿರುವ ಆರ್ಥಿಕ ಪಾಲುದಾರಿಕೆಯಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ
.2025ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಹೊಸ ಅಮೆರಿಕದ ಕಾನ್ಸುಲೇಟ್ ಕಚೇರಿ ಸ್ಥಾಪನೆಯಾಗಿರುವುದು ಭಾರತ–ಅಮೆರಿಕ ಸಂಬಂಧಗಳಲ್ಲಿ ಹಾಗೂ ಕರ್ನಾಟಕದ ಕಾರ್ಯತಂತ್ರದ ಮಹತ್ವದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ.ಇದೇ ವೇಳೆ, ಅಮೆರಿಕದ ಕಾನ್ಸುಲೇಟ್, U.S. Commercial Service, AMCHAM ಹಾಗೂ USIBCಗಳೊಂದಿಗೆ ಇನ್ನಷ್ಟು ನಿಕಟ ಸಹಕಾರ ಬೆಳೆಸುವ ಮಾರ್ಗಗಳ ಬಗ್ಗೆಯೂ ಚರ್ಚಿಸಲಾಯಿತು
.Invest Karnataka ಮೂಲಕ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವುದು, ಕೈಗಾರಿಕಾ ಸಹಭಾಗಿತ್ವವನ್ನು ಬಲಪಡಿಸುವುದು ಮತ್ತು ನವೋದ್ಯಮ ಕ್ಷೇತ್ರದಲ್ಲಿ ಭಾರತ–ಅಮೆರಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶವನ್ನು ಸಭೆಯಲ್ಲಿ ಪ್ರಮುಖವಾಗಿ ಒತ್ತಿಹೇಳಲಾಯಿತು.
ಕರ್ನಾಟಕ–ಅಮೆರಿಕ ಸಹಭಾಗಿತ್ವವು ರಾಜ್ಯದ ತಂತ್ರಜ್ಞಾನ, ಕೈಗಾರಿಕೆ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಹೊಸ ಅವಕಾಶಗಳನ್ನು ತೆರೆದಿಡುವ ನಿರೀಕ್ಷೆಯಿದೆ.
