ಗದಗ, ಆ.6: ಗದಗ ಜಿಲ್ಲಾ ಸವಿತಾ ಸಮಾಜವು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎಚ್.ಕೆ. ಪಾಟೀಲ್ ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡದಿರುವುದನ್ನು ಖಂಡಿಸಿ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ
.ಜಿಲ್ಲಾ ಸವಿತಾ ಸಮಾಜದ ತುರ್ತು ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ, ನೂತನ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ರಾಯರೆಡ್ಡಿ ಅವರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಗುವುದು. ಆದರೆ, ಸಮಾಜದ ಯಾವುದೇ ಬೇಡಿಕೆಗಳಿಗೆ ಸಂಬಂಧಿಸಿದ ಮನವಿಪತ್ರವನ್ನು ಸಲ್ಲಿಸುವುದಿಲ್ಲ ಎಂದು ತಿಳಿಸಿದರು
.ಸಮಾಜದ ಎಲ್ಲಾ ಬೇಡಿಕೆಗಳನ್ನು ಎಚ್.ಕೆ. ಪಾಟೀಲ್ ಅವರ ಮೂಲಕವೇ ಈಡೇರಿಸಿಕೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದರು.ಸಭೆಯಲ್ಲಿ ಕೈಗೊಂಡ ಮತ್ತೊಂದು ನಿರ್ಧಾರದಂತೆ, ಗದಗ ಜಿಲ್ಲೆಗೆ ಆಗಮಿಸುವ ನೂತನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸವಿತಾ ಸಮಾಜದ ಕ್ಷೌರಿಕರು ಕ್ಷೌರ ಸೇವೆ ನೀಡದಿರಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು
.ರಾಜ್ಯ ಸರ್ಕಾರವು ಎಚ್.ಕೆ. ಪಾಟೀಲ್ ಅವರಂತಹ ಹಿರಿಯ ನಾಯಕನನ್ನು ಕಡೆಗಣಿಸುವ ಮೂಲಕ ಉತ್ತರ ಕರ್ನಾಟಕ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ಸಮಾಜದ ಮುಖಂಡರು ಆರೋಪಿಸಿದರು. ಈ ಕುರಿತು ಮುಂದೆಯೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು
.ಸಭೆಯಲ್ಲಿ ಹಿರಿಯ ಮುಖಂಡರಾದ ಹನುಮಂತಪ್ಪ ರಾಂಪೂರ, ಯಲ್ಲಪ್ಪ ರಾಯಚೂರ, ಪರಶುರಾಮ (ಬಜ್ಜು) ರಾಂಪೂರ, ಕೃಷ್ಣಾ ಬಾಯಲಗುಡ್ಡ, ಪರಶುರಾಮ ಕೋಟೆಕಲ್ಲ, ರಾಜು ಮಾನೆ, ವಿಕಾಸ ಕ್ಷೀರಸಾಗರ, ಎಲ್ಲಪ್ಪ ರಾಂಪೂರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾನೆ ಸ್ವಾಗತಿಸಿದರು.
ಜಿಲ್ಲಾ ಖಜಾಂಚಿ ಅರೂಣ ರಾಂಪೂರ ಕಾರ್ಯಕ್ರಮ ನಿರೂಪಿಸಿದರು. ಹಿರಿಯರಾದ ದೀಪಕ ಮಾನೆ ಹಾಗೂ ಪಾಂಡು ಕಾಳೆ ವಂದನಾರ್ಪಣೆ ಸಲ್ಲಿಸಿದರು
.ಪ್ರಮುಖ ಹೇಳಿಕೆ”
ಎಚ್.ಕೆ. ಪಾಟೀಲ್ ಅವರು ಉತ್ತರ ಕರ್ನಾಟಕದ ಧ್ವನಿಯಾಗಿದ್ದು, ಹಿಂದುಳಿದ ವರ್ಗಗಳು, ರೈತರು ಹಾಗೂ ಶ್ರಮಿಕರ ಪರವಾಗಿ ಸದಾ ಧ್ವನಿಯೆತ್ತಿರುವ ನಾಯಕರು. ಅವರನ್ನು ಕಡೆಗಣಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಸವಿತಾ ಸಮಾಜ ಕೈಗೊಂಡಿರುವ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.”— ಹನುಮಂತಪ್ಪ ರಾಂಪೂರ, ಹಿರಿಯ ಮುಖಂಡರು, ಗದಗ ಜಿಲ್ಲಾ ಸವಿತಾ ಸಮಾಜ.
