ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ, ಧಾರವಾಡ ಜಿಲ್ಲೆಯ ಮರೆವಾಡ ಗ್ರಾಮದ ಶ್ರೀ ಲಕ್ಷ್ಮೀ ದೇವಿ ಮಹಿಳಾ ಜಾನಪದ ಕಲಾ ಡೊಳ್ಳಿನ ಸಂಘ ವತಿಯಿಂದ ಆಯೋಜಿಸಲಾದ ಗ್ರಾಮೀಣ ಜಾನಪದ ಕಲೆಗಳ ಸಂಭ್ರಮದ ಕಾರ್ಯಕ್ರಮ “ಜಾನಪದ ಉತ್ಸವ” ಜುಲೈ 19, 2026ರಂದು ಬೆಳಗ್ಗೆ 11:30ಕ್ಕೆ ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಗ್ರಾಮೀಣ ಸಂಸ್ಕೃತಿ, ಪರಂಪರೆ ಮತ್ತು ಜಾನಪದ ಕಲೆಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದ ಈ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಹಾಗೂ ಕಲಾವಿದರು ಸಾಕ್ಷಿಯಾದರು.ಕಾರ್ಯಕ್ರಮದ ಸಾನಿಧ್ಯವನ್ನು ಮರೆವಾಡ ಗ್ರಾಮದ ಪರಮಪೂಜ್ಯ ಶ್ರೀ ಶೇಖರಯ್ಯ ಹಿರೇಮಠ ಸ್ವಾಮೀಜಿ ವಹಿಸಿ, ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಜೀವನಾಡಿಯಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಆಶೀರ್ವಚನ ನೀಡಿದರು.ಕಾರ್ಯಕ್ರಮವನ್ನು ಕರ್ನಾಟಕ ಬಯಲು ಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಅವರು ಡೊಳ್ಳು ವಾದ್ಯ ಬಾರಿಸುವ ಮೂಲಕ ಹಾಗೂ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂದಿನ ಆಧುನಿಕ ಜೀವನಶೈಲಿ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಗ್ರಾಮೀಣ ಜಾನಪದ ಕಲೆಗಳು ನಿಧಾನವಾಗಿ ಮರೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.”ಕಲಾವಿದರು ಅಭಿವೃದ್ಧಿಯಾಗಬೇಕಾದರೆ ಜಾನಪದ ಕಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಾನು ಸದಾ ಸಹಕಾರ ನೀಡಲು ಸಿದ್ಧನಿದ್ದೇನೆ” ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ್ ತುರಮರಿ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಮಾತನಾಡಿ, ಜಿಲ್ಲೆಯ ಕಲಾವಿದರಿಗಾಗಿ ಇಲಾಖೆಯಿಂದ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಕಲಾವಿದರು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು
. ಗ್ರಾಮೀಣ ಭಾಗದಲ್ಲಿ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಇಲಾಖೆಯಿಂದ ಅಗತ್ಯ ಸಹಕಾರ ಹಾಗೂ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಮಲ್ಲಿಕಾರ್ಜುನ್ ಕೊಯಪ್ಪನವರ, ಮರೆವಾಡ ಗ್ರಾಮದ ಮಾಜಿ ಅಧ್ಯಕ್ಷ ಚನ್ನಬಸಪ್ಪ ಸಿ. ಮೊರಬದ, ಗ್ರಾಮದ ಹಿರಿಯರಾದ ಬಸವರಾಜ್ ಮಾದರ್, ಪರಮೇಶ್ವರ ಬಿ. ಮಾದರ್, ಶ್ರೀಮತಿ ಸುನಿತಾ ಹಡಪದ್, ಆನಂದ ದ್ಯಾ ಮಾದರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಾದ ಮುದ್ದಪ್ಪ ಜಂಗಳಿ, ಬಸಪ್ಪ ಮಾದರ್, ಪರಶುರಾಮ ಮಾದರ್, ಮಲ್ಲಪ್ಪ ಲಕ್ಕಣ್ಣವರ್, ಶಂಕರಪ್ಪ, ಮಹಾದೇವಪ್ಪ ಗರಗದ, ಶ್ರೀಕಾಂತ್ ಬಬಲ್, ದ್ಯಾಮಣ್ಣ ಲಮಾಣಿ, ಶಿವಾನಂದ ಅಮರಶೆಟ್ಟಿ, ಭೀಮಸಿ ಕಬ್ಬೂರಕರ, ಲಕ್ಷ್ಮಪ್ಪ ಕಂಬಳನವರ್, ಧರ್ಮರಾಜ್ ಕಂಬಳೇನವರ್ ಹಾಗೂ ಹನುಮಂತಪ್ಪ ಮಾದರ್ ಸೇರಿದಂತೆ ಹಲವಾರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮವನ್ನು ಶ್ರೀಮತಿ ಮಹಾದೇವಿ ದುರ್ಗವ್ವ ಮಾದರ್ ಅವರು ನಿರೂಪಿಸಿದರು.
ಶ್ರೀಮತಿ ಬಸವ ಮಾದರ್ ಅತಿಥಿಗಳನ್ನು ಸ್ವಾಗತಿಸಿದರೆ, ಶ್ರೀಮತಿ ಶೋಭಾ ಕಂಬಳನ್ನವರ್ ವಂದನಾರ್ಪಣೆ ಸಲ್ಲಿಸಿದರು.ವೇದಿಕೆಯ ಮೇಲೆ ಹಿರಿಯ ಜಾನಪದ ಕಲಾವಿದರಾದ ಅರ್ಜುನ್ ಮಾದರ್, ಶ್ರೀಮತಿ ಲಕ್ಷ್ಮಿ ಮಾದರ್, ಶ್ರೀಮತಿ ರುದ್ರವ್ವ ಮಾದರ್, ಶ್ರೀಮತಿ ಶಕೀಲವ್ವ ಮಾದರ್, ಶ್ರೀಮತಿ ಎಲ್ಲಮ್ಮ ಮಾದರ್, ಬಸ್ಸು ಅಮೀನಭಾವಿ, ತಿಪ್ಪಣ್ಣ ಮಾದರ್ ಹಾಗೂ ಭೀಮಪ್ಪ ಭಜಂತ್ರಿ ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಇದಾದ ಬಳಿಕ ವಿವಿಧ ಕಲಾತಂಡಗಳಿಂದ ಡೊಳ್ಳು ಕುಣಿತ, ಕರಡಿ ವಾದ್ಯ, ಜಗ್ಗಲಿಗೆ, ಭಜನಾ ಪದಗಳು, ತತ್ವಪದಗಳು, ಸಂಪ್ರದಾಯ ಪದಗಳು ಸೇರಿದಂತೆ ಅನೇಕ ಜಾನಪದ ಕಲಾ ಪ್ರದರ್ಶನಗಳು ಅದ್ಭುತವಾಗಿ ಮೂಡಿಬಂದವು.
ಪ್ರೇಕ್ಷಕರು ಕಲಾವಿದರ ಪ್ರದರ್ಶನಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತಪಡಿಸಿ ಕರತಾಡನದ ಮೂಲಕ ಪ್ರೋತ್ಸಾಹಿಸಿದರು.ಗ್ರಾಮೀಣ ಸಂಸ್ಕೃತಿ, ಪರಂಪರೆ ಹಾಗೂ ಜಾನಪದ ಕಲೆಗಳ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅವುಗಳನ್ನು ಪರಿಚಯಿಸುವ ಮಹತ್ವದ ಉದ್ದೇಶದೊಂದಿಗೆ ಆಯೋಜಿಸಲಾದ “ಜಾನಪದ ಉತ್ಸವ” ಎಲ್ಲರ ಮನ ಗೆದ್ದು, ಜಾನಪದ ಕಲೆಯ ಜೀವಂತಿಕೆಯ ಸಂಕೇತವಾಗಿ ಯಶಸ್ವಿಯಾಗಿ ಸಂಪನ್ನಗೊಂಡಿತು.
