ಗದಗ 19: ಇಲ್ಲಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ವಸತಿ ನಿಲಯದಲ್ಲಿ ಸಾಂಪ್ರದಾಯಿಕ ಕುಸ್ತಿ ತರಬೇತಿಯನ್ನು ಕಡಿತಗೊಳಿಸುವ ಕ್ರೀಡಾ ಇಲಾಖೆಯ ಅವೈಜ್ಞಾನಿಕ ‘ಪಿರಮಿಡ್ ಮಾದರಿ’ ಯೋಜನೆಗೆ ರಾಜ್ಯ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ
. ಈ ಮೂಲಕ ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಹಾಗೂ ಬಡ ಕುಸ್ತಿ ಪ್ರತಿಭೆಗಳ ಹಿತರಕ್ಷಣೆಗಾಗಿ ನಡೆದ ಹೋರಾಟಕ್ಕೆ ಮಹತ್ವದ ಜಯ ಸಿಕ್ಕಂತಾಗಿದೆ.*ಸಮಸ್ಯೆಯ ಹಿನ್ನೆಲೆ:* ಗದಗ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ 5 ರಿಂದ 10ನೇ ತರಗತಿಯವರೆಗಿನ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳಿಗೆ ಕುಸ್ತಿ ತರಬೇತಿ ಹಾಗೂ ವಸತಿ ನೀಡುವ ಅತ್ಯುತ್ತಮ ವ್ಯವಸ್ಥೆ ಜಾರಿಯಲ್ಲಿತ್ತು
. ಆದರೆ, ಇತ್ತೀಚೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ‘ಬುನಾದಿ ತರಬೇತಿ’ ಎಂಬ ಹೊಸ ನಿಯಮದಡಿ ಈ ತರಬೇತಿಯನ್ನು ಕೇವಲ 5 ರಿಂದ 7ನೇ ತರಗತಿಗೆ ಸೀಮಿತಗೊಳಿಸಲು ಮುಂದಾಗಿತ್ತು. ಇಲಾಖೆಯ ಈ ಕ್ರಮದಿಂದಾಗಿ 8, 9 ಮತ್ತು 10ನೇ ತರಗತಿಯ ನೂರಾರು ಗ್ರಾಮೀಣ ಕುಸ್ತಿ ಪ್ರತಿಭೆಗಳು ವಸತಿ ಮತ್ತು ತರಬೇತಿಯಿಂದ ವಂಚಿತರಾಗುವ ಆತಂಕ ಎದುರಾಗಿತ್ತು. ಅಲ್ಲದೆ ಕಳೆದ ಒಂದು ವರ್ಷದಿಂದ ಇಲ್ಲಿ ಪರಿಣಿತ ಕುಸ್ತಿ ತರಬೇತುದಾರರು (ಕೋಚ್) ಇಲ್ಲದೆ ಕ್ರೀಡಾಪಟುಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿತ್ತು.
ಈ ಗಂಭೀರ ಸಮಸ್ಯೆಯ ವಿರುದ್ಧ ಗದಗಿನ ಪ್ರಮುಖ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಅವರು ಗದಗ ಜಿಲ್ಲಾ ಕುಸ್ತಿಪಟುಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ, ಜಿಲ್ಲಾ ಕ್ರೀಡಾ ಜಗಲಿ ಫೌಂಡೇಶನ್ ಹಾಗೂ ಹಿರಿಯ ಕುಸ್ತಿ ಅಭಿಮಾನಿಗಳನ್ನು ಒಟ್ಟುಗೂಡಿಸಿ ಸರ್ಕಾರದ ವಿರುದ್ಧ ಬಲವಾದ ಹೋರಾಟ ರೂಪಿಸಿದ್ದರು. “
ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಪ್ರೇಮಾ ಹುಚ್ಚಣ್ಣನವರ್, ಶಾರದಾ ಬೇಲೇರಿ, ಪಾಲಾಕ್ಷಗೌಡ ಬೇಲೇರಿ, ಪ್ರಶಾಂತಗೌಡ ಬೇಲೇರಿ, ಅನಿಲ್ ದರ್ಗಿ. ರಾಹುಲ್ ವಸಂತ ಸಿದ್ದಮ್ಮನಹಳ್ಳಿ. ಬಸೀರ ವಕಾರದ ಅವರಂತಹ ರಾಷ್ಟ್ರ-ಅಂತರರಾಷ್ಟ್ರೀಯ ಸಾಧಕರನ್ನು ನೀಡಿದ ಗದಗದ ಕುಸ್ತಿ ಪರಂಪರೆಯನ್ನು ಕ್ರೀಡಾ ಇಲಾಖೆಯ ಮಲತಾಯಿ ಧೋರಣೆ ಕಮರಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿ
, ಹಳೆಯ ವ್ಯವಸ್ಥೆಯನ್ನೇ ಯಥಾಸ್ಥಿತಿ ಮುಂದುವರಿಸಬೇಕೆಂದು ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದರು. *ಸಚಿವರ ತ್ವರಿತ ಸ್ಪಂದನೆ – ಆದೇಶಕ್ಕೆ ತಡೆ:* ಈ ನ್ಯಾಯಸಮ್ಮತ ಹೋರಾಟಕ್ಕೆ ಗದಗ ಭಾಗದ ಜನನಾಯಕರಾದ ಸನ್ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಚ್.ಕೆ. ಪಾಟೀಲ್ ಸಾಹೇಬರು ಹಾಗೂ ಕ್ರೀಡಾ ಸಚಿವರು ಹಾಗೂ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಸಾಹೇಬರು ತಕ್ಷಣವೇ ಸ್ಪಂದಿಸಿದರು. ಸಚಿವರ ಕಟ್ಟುನಿಟ್ಟಿನ ಸೂಚನೆ ಹಾಗೂ ಬೆಂಗಳೂರು ಹಾಗೂ ಗದಗ ಜಿಲ್ಲೆಯ ಕ್ರೀಡಾ ಇಲಾಖೆಯ ಉನ್ನತ ಅಧಿಕಾರಿಗಳ ಸಕಾರಾತ್ಮಕ ಶ್ರಮದ ಫಲವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಜಾಹೀದಾ ಎನ್. ಗಚ್ಛಿನಮಹಲ್ ಅವರು ಹೊರಡಿಸಿರುವ ಅಧಿಕೃತ ಸುತ್ತೋಲೆ (ಸಂಖ್ಯೆ: ವೈಎಸ್ಡಿ-ಸಿಡಿಎನ್/487/2025) ಪ್ರಕಾರ, ಕ್ರೀಡಾ ವಸತಿ ನಿಲಯಗಳನ್ನು ಪಿರಮಿಡ್ ಮಾದರಿಯಲ್ಲಿ ಪುನರ್ ರಚಿಸುವ ಕುರಿತಾದ ಆದೇಶವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
*ಗಣ್ಯರಿಂದ ಕೃತಜ್ಞತೆ ಸಲ್ಲಿಕೆ:* ಬಡ ಕ್ರೀಡಾಪಟುಗಳ ಭವಿಷ್ಯವನ್ನು ಕಾಯ್ದಿರಿಸಿದ ಈ ತ್ವರಿತ ಕ್ರಮಕ್ಕಾಗಿ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ, ಗದಗ ಜಿಲ್ಲಾ ಕುಸ್ತಿಪಟುಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ, ಜಿಲ್ಲೆಯ ಹಿರಿಯ ಪೈಲ್ವಾನರಾದ ರಮೇಶ್ ಬಾವಿ, ಸೋಮಪ್ಪ ಮೇಲ್ಮನಿ, ಬಾಲೆಸಾಬ್ ನದಾಫ್, ಪರಶುರಾಮ್ ಹೇಟ್ಟಿ, ಮಾಬುಸಾಬ ಹರಿಯಾಣ, ಕುಸ್ತಿ ಪೈಲ್ವಾನ್ ಸಂಘದ ಹಿರಿಯ ಅಧ್ಯಕ್ಷರಾದ ದೇವಪ್ಪ ಗಡೇದ ಹಾಗೂ ನೂರಾರು ಪಾಲಕರು ಸನ್ಮಾನ್ಯ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆಂಗಳೂರು ಮತ್ತು ಗದಗ ಜಿಲ್ಲೆಯ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ
. ಜೊತೆಗೆ, ತಕ್ಷಣವೇ ಕ್ರೀಡಾಂಗಣಕ್ಕೆ ಅನುಭವಿ ಕುಸ್ತಿ ಕೋಚ್ಗಳನ್ನು ನೇಮಕ ಮಾಡಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಕೃಷ್ಣಾ ಎಚ್. ಹಡಪದ, 9845650612
