ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ಸುಮಾರು 39 ಸಾವಿರ ದೇವಸ್ಥಾನಗಳಲ್ಲಿ ಭದ್ರತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಸಿಸಿಟಿವಿ ನಿಗಾ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ವಿಶೇಷವಾಗಿ ‘ಎ’ ವರ್ಗದ ದೇವಸ್ಥಾನಗಳ ಹುಂಡಿಗಳ ಮೇಲೆ ನಾಲ್ಕು ದಿಕ್ಕುಗಳಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಕೇಂದ್ರ ನಿಯಂತ್ರಣ ಕೊಠಡಿಯಿಂದ (ಕಂಟ್ರೋಲ್ ರೂಮ್) ಮೇಲ್ವಿಚಾರಣೆ ನಡೆಸುವ ಯೋಜನೆ ರೂಪಿಸಲಾಗಿದೆ.ಮುಜರಾಯಿ ಇಲಾಖೆಯ ಮಾಹಿತಿ ಪ್ರಕಾರ, ಭಕ್ತರು ದೇವಸ್ಥಾನಗಳ ಹುಂಡಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಕೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ, ಹುಂಡಿ ಕಳ್ಳತನ ಹಾಗೂ ಕಾಣಿಕೆ ಹಣದ ಲೆಕ್ಕಪತ್ರ ನಿರ್ವಹಣೆಯಲ್ಲಿ ಯಾವುದೇ ದುರುಪಯೋಗ ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ, ಪ್ರಮುಖ ದೇವಸ್ಥಾನಗಳ ಚಟುವಟಿಕೆಗಳ ಮೇಲೆ ನೇರ ನಿಗಾ ಇಡುವ ವ್ಯವಸ್ಥೆ ಜಾರಿಯಾಗಲಿದೆ.ಇದರ ಜೊತೆಗೆ, ರಾಜ್ಯದ ಹೊರಗಿನ ಪ್ರಮುಖ ಯಾತ್ರಾ ಕ್ಷೇತ್ರಗಳಲ್ಲಿರುವ ಕರ್ನಾಟಕ ಮುಜರಾಯಿ ಇಲಾಖೆಯ ಆಸ್ತಿಗಳ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಿದೆ.
ತಿರುಪತಿಯಲ್ಲಿ ಕರ್ನಾಟಕ ಸರ್ಕಾರಕ್ಕೆ ಸೇರಿದ ಸುಮಾರು 7 ಎಕರೆ ಭೂಮಿಯಲ್ಲಿ ಯಾತ್ರಾರ್ಥಿಗಳಿಗೆ ಈಗಾಗಲೇ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಮಾದರಿಯಲ್ಲಿ ಶ್ರೀಶೈಲ, ವಾರಣಾಸಿ ಹಾಗೂ ತುಳಜಾಪುರ ಸೇರಿದಂತೆ ಇತರ ಯಾತ್ರಾ ಕ್ಷೇತ್ರಗಳಲ್ಲಿರುವ ಇಲಾಖೆಯ ಆಸ್ತಿಗಳಲ್ಲೂ ವಸತಿಗೃಹ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ
.ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲಾಗಿದ್ದು, ಭಕ್ತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಪ್ರಮುಖ ದೇವಸ್ಥಾನಗಳ ಅಭಿವೃದ್ಧಿಗೂ ಇದೇ ಮಾದರಿಯ ಯೋಜನೆಗಳನ್ನು ರೂಪಿಸಲು ಇಲಾಖೆ ಮುಂದಾಗಿದೆ.ಮುಜರಾಯಿ ಇಲಾಖೆಯ ಮಾಹಿತಿಯಂತೆ, ‘ಎ’ ವರ್ಗದ ದೇವಸ್ಥಾನಗಳಲ್ಲಿ ಸುಮಾರು ₹2,521 ಕೋಟಿ ಮೊತ್ತ ಸ್ಥಿರ ಠೇವಣಿ (Fixed Deposit) ರೂಪದಲ್ಲಿ ಲಭ್ಯವಿದೆ.
ಈ ಹಣವನ್ನು ಸಂಬಂಧಿತ ದೇವಸ್ಥಾನಗಳ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಬಳಸಲಾಗುವುದು ಎಂದು ತಿಳಿಸಲಾಗಿದೆ.ದೇವಸ್ಥಾನಗಳ ಕಾಣಿಕೆ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಆಯಾ ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ.
ಆದರೆ ನಿಯಮಾನುಸಾರ ಶೇ.10ರಷ್ಟು ಹಣವನ್ನು ಮಾತ್ರ ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸುವ ವ್ಯವಸ್ಥೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.ಈ ಯೋಜನೆಯ ಮೂಲಕ ದೇವಸ್ಥಾನಗಳಲ್ಲಿ ಪಾರದರ್ಶಕ ಹಣಕಾಸು ನಿರ್ವಹಣೆ, ಭದ್ರತೆ ಹೆಚ್ಚಳ, ಭಕ್ತರಿಗೆ ಉತ್ತಮ ಸೌಲಭ್ಯ ಹಾಗೂ ರಾಜ್ಯದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
