ಗದಗ, ಜುಲೈ 6: ಗದಗ ಜಿಲ್ಲೆಯ ಗಂಗಾಪುರ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನ ಹಾಗೂ ಜಗದ್ಗುರು ವೀರೇಶ್ವರ ಪುಣ್ಯಾಶ್ರಮದ ನೂತನ ರಥದ ಗಾಲಿಗಳ ಮೇಲಿನ ಹೆಸರಿನ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ದಾನಿ ಫಿರಸಾಬ್ ಕೌತಾಳ ಅವರು ತಮ್ಮ ಹೆಸರನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವುದು ಸಮಾಜಕ್ಕೆ ಮಾದರಿಯ ನಡೆ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆ ಸರ್ವಧರ್ಮ ಸಮಭಾವ, ಸಹೋದರತ್ವ ಹಾಗೂ ಸಾಮರಸ್ಯದ ನೆಲೆಯಾಗಿದ್ದು, ವೈಯಕ್ತಿಕ ಪ್ರತಿಷ್ಠೆಗಿಂತ ಸಮಾಜದ ಶಾಂತಿ ಮತ್ತು ಭಾವೈಕ್ಯತೆಯೇ ಮುಖ್ಯವಾಗಬೇಕು ಎಂದು ಹೇಳಿದರು.ಗದಗದ ಇತಿಹಾಸವು ಹಿಂದೂ-ಮುಸ್ಲಿಂ ಸೌಹಾರ್ದ, ಧಾರ್ಮಿಕ ಸಹಿಷ್ಣುತೆ ಮತ್ತು ಪರಸ್ಪರ ಗೌರವದ ಸಂದೇಶವನ್ನು ಸಾರಿದೆ.
ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಫಕೀರೇಶ್ವರ ಮಹಾಸ್ವಾಮಿಗಳು, ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಗಾನಯೋಗಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳಂತಹ ಮಹನೀಯರು ಸಮಾಜದಲ್ಲಿ ಸೌಹಾರ್ದ ಬೆಳೆಸಲು ನೀಡಿದ ಕೊಡುಗೆ ಎಲ್ಲರಿಗೂ ಆದರ್ಶವಾಗಿದೆ ಎಂದು ಅವರು ನೆನಪಿಸಿದರು
.ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಅಥವಾ ದ್ವೇಷದ ವಾತಾವರಣ ನಿರ್ಮಾಣವಾಗದಂತೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಹಿರಿಯ ನಾಯಕರು ಮಧ್ಯಸ್ಥಿಕೆ ವಹಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಹಿರಿಯ ಮಾರ್ಗದರ್ಶಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಶ್ರೀಮಠ ಹಾಗೂ ದೇವಸ್ಥಾನದ ಆಡಳಿತ ಮಂಡಳಿ, ದಾನಿ ಕುಟುಂಬದವರು, ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಸಮಾಜದ ಹಿರಿಯರನ್ನು ಒಳಗೊಂಡ ಸೌಹಾರ್ದ ಸಭೆಯನ್ನು ಶೀಘ್ರದಲ್ಲಿ ಕರೆಯುವಂತೆ ಕೃಷ್ಣಾ ಹಡಪದ ಒತ್ತಾಯಿಸಿದ್ದಾರೆ
.ಈ ಸಭೆಯ ಮೂಲಕ ಯಾವುದೇ ವ್ಯಕ್ತಿಯ ಮನಸ್ಸಿಗೆ ನೋವಾಗದಂತೆ ಪರಸ್ಪರ ಚರ್ಚೆ ನಡೆಸಿ ವಿವಾದಕ್ಕೆ ಶಾಶ್ವತ ತೆರೆ ಎಳೆಯಬೇಕು. ಧಾರ್ಮಿಕ ಆಚರಣೆಗಳು ಜನರಲ್ಲಿ ಭಯವಲ್ಲ, ನೆಮ್ಮದಿ ಮತ್ತು ಭಕ್ತಿ ಮೂಡಿಸಬೇಕು ಎಂದು ಅವರು ತಿಳಿಸಿದ್ದಾರೆ.ಮುಂದಿನ ದಿನಗಳಲ್ಲಿ ಗಂಗಾಪುರ ಪೇಟೆಯ ದುರ್ಗಾದೇವಿ ಜಾತ್ರೆ ಹಾಗೂ ಪುಣ್ಯಾಶ್ರಮದ ಉತ್ಸವಗಳು ಯಾವುದೇ ಗೊಂದಲವಿಲ್ಲದೆ ಹಿಂದಿನಂತೆ ಶಾಂತಿ, ಸೌಹಾರ್ದ ಮತ್ತು ಸಂಭ್ರಮದಿಂದ ನಡೆಯಬೇಕು.
ಈ ಮೂಲಕ ಗದಗ ಜಿಲ್ಲೆ ಮತ್ತೊಮ್ಮೆ ಇಡೀ ಕರ್ನಾಟಕಕ್ಕೆ ಭಾವೈಕ್ಯತೆಯ ಸಂದೇಶ ಸಾರುವಂತಾಗಲಿ ಎಂದು ಅವರು ಆಶಿಸಿದರು.ಜಾತಿಗಿಂತ ಮಾನವೀಯತೆಯೇ ದೊಡ್ಡದು: ಕೃಷ್ಣಾ ಹಡಪದಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಾ ಎಚ್. ಹಡಪದ, “ಯಾರೂ ಕೂಡ ತಾವು ಯಾವ ಜಾತಿಯಲ್ಲಿ ಹುಟ್ಟಬೇಕು ಎಂದು ಆಯ್ಕೆ ಮಾಡಿಕೊಂಡು ಹುಟ್ಟುವುದಿಲ್ಲ. ಮನುಷ್ಯರ ನಡುವೆ ಜಾತಿ-ಮತದ ಗೋಡೆಗಳನ್ನು ನಿರ್ಮಿಸುವ ಬದಲು ಮಾನವೀಯತೆ, ಪ್ರೀತಿ ಮತ್ತು ಸಾಮರಸ್ಯವನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ
. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಬದಲು, ಪರಸ್ಪರ ಗೌರವದಿಂದ ಬದುಕುವುದೇ ನಮ್ಮ ಗುರು-ಹಿರಿಯರಿಗೆ ಸಲ್ಲಿಸುವ ನಿಜವಾದ ಗೌರವ” ಎಂದು ಹೇಳಿದರು.
