ಗದಗ: ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಭಾರತೀಯ ಯೋಗ ಪದ್ಧತಿ, ಆಧ್ಯಾತ್ಮಿಕ ಶಕ್ತಿ ಮತ್ತು ತಪಸ್ಸಿನ ಶಕ್ತಿ ಎಷ್ಟು ಅಪಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಗದಗ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಅಂತೂರ ಬೆಂತೂರ ಗ್ರಾಮದ ಬುದೀಶ್ವರ ಮಠದಲ್ಲಿ ಜಗತ್ತಿನ ಕಲ್ಯಾಣಕ್ಕಾಗಿ ಮತ್ತು ಲೋಕ ಶಾಂತಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಠಿಣ ತಪಸ್ಸು ಇಂದು ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಶ್ರೀ ಷ.ಬ್ರ ಜಗದ್ಗುರು ರಾಚೋಟೇಶ್ವರ ಸ್ವಾಮೀಜಿಗಳು ಸತತ 33 ದಿನಗಳ ಕಾಲ (ಒಟ್ಟು 775 ಗಂಟೆಗಳು) ನಡೆಸಿದ ಸುದೀರ್ಘ ‘ಶಿವಯೋಗ ಸಮಾಧಿ’ಯನ್ನು ಮುಗಿಸಿ ಇಂದು ಮಠದ ಕಲ್ಲಿನ ಕೋಣೆಯಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ.
ಗಾಳಿ, ಬೆಳಕು, ಆಹಾರವಿಲ್ಲದ ಕಠಿಣ ತಪಸ್ಸು!ಕಳೆದ 33 ದಿನಗಳ ಹಿಂದೆ ಶ್ರೀ ರಾಚೋಟೇಶ್ವರ ಸ್ವಾಮೀಜಿಗಳು ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಮಠದ ಆವರಣದ ಸಣ್ಣ ಕಲ್ಲಿನ ಕೋಣೆಯೊಂದನ್ನು ಪ್ರವೇಶಿಸಿದ್ದರು.
ಸ್ವಾಮೀಜಿಗಳು ಒಳಗೆ ಹೋದ ತಕ್ಷಣವೇ ಆ ಕೋಣೆಯ ಏಕೈಕ ದ್ವಾರವನ್ನು ಇಟ್ಟಿಗೆ ಮತ್ತು ಸಿಮೆಂಟ್ ಬಳಸಿ ಸಂಪೂರ್ಣವಾಗಿ ಮುಚ್ಚಿ, ಸೀಲ್ ಮಾಡಲಾಗಿತ್ತು.ಸಂಪೂರ್ಣವಾಗಿ ಗಾಳಿ ಸಂಚಾರವಿಲ್ಲದ, ಕಗ್ಗತ್ತಲಿನಿಂದ ಕೂಡಿದ, ಆಹಾರ ಮತ್ತು ಹನಿ ನೀರೂ ಸಿಗದ ಆ ಸಣ್ಣ ಕೋಣೆಯೊಳಗೆ ಸ್ವಾಮೀಜಿಗಳು ಕೇವಲ ಯೋಗಶಕ್ತಿ ಹಾಗೂ ಮಂತ್ರ ಜಪದ ಬಲದಿಂದ ಸಮಾಧಿಸ್ಥಿತಿಗೆ ಜಾರಿದ್ದರು. ವೈಜ್ಞಾನಿಕವಾಗಿ ಮನುಷ್ಯನಿಗೆ ಆಮ್ಲಜನಕ (Oxygen) ಮತ್ತು ನೀರು ಅತ್ಯಗತ್ಯವಾಗಿದ್ದರೂ, ಸ್ವಾಮೀಜಿಗಳು ಯೋಗ ವಿಜ್ಞಾನದ ಮೂಲಕ ಶ್ವಾಸಕೋಶದ ಗತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಈ ಅಸಾಧ್ಯವಾದ ಸಾಧನೆಯನ್ನು ಮಾಡಿ ತೋರಿಸಿದ್ದಾರೆ.ಭಕ್ತ ಸಾಗರ;
ಹಬ್ಬದ ವಾತಾವರಣ!ಇಂದು ನಿಗದಿತ 775 ಗಂಟೆಗಳ ಅವಧಿ ಮುಗಿಯುತ್ತಿದ್ದಂತೆ, ಇಟ್ಟಿಗೆಯ ಗೋಡೆಯನ್ನು ಸಾರ್ವಜನಿಕವಾಗಿ ಮತ್ತು ಮಠದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಒಡೆಯಲಾಯಿತು
. ಗೋಡೆ ಮುರಿದು ಕೋಣೆಯ ಬಾಗಿಲು ತೆರೆಯುತ್ತಿದ್ದಂತೆ ಕೋಣೆಯೊಳಗೆ ಪ್ರಶಾಂತ ಚಿತ್ತರಾಗಿ ಕುಳಿತಿದ್ದ ಶ್ರೀಗಳ ದರ್ಶನವಾಯಿತು. ಸ್ವಾಮೀಜಿಗಳು ಸಮಾಧಿಸ್ಥಿತಿಯಿಂದ ಎದ್ದು ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಮುಖದಲ್ಲಿ ಆನಂದ ಭಾಷ್ಪ ಹರಿಯಿತು. ಗ್ರಾಮದ ತುಂಬೆಲ್ಲ ಜಯಘೋಷಗಳು ಮೊಳಗಿದವು.
ರಾಜ್ಯದ ಮೂಲೆ ಮೂಲೆಗಳಿಂದ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹರಿದುಬಂದಿದ್ದ ಸಾವಿರಾರು ಭಕ್ತರು ಅಂತೂರ ಬೆಂತೂರ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಗ್ರಾಮದಲ್ಲಿ ಹಬ್ಬದ ಮಾದರಿಯ ವಾತಾವರಣ ನಿರ್ಮಾಣವಾಗಿದ್ದು, ಮಠದ ವತಿಯಿಂದ ಭಕ್ತರಿಗೆ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಸಮಾಧಿಯಿಂದ ಹೊರಬಂದ ಶ್ರೀಗಳಿಗೆ ವಿಶೇಷ ಪೂಜೆ, ಆರತಿ ನೆರವೇರಿಸಿ, ನಂತರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಡಲಾಯಿತು.ವಿಜ್ಞಾನ ಲೋಕಕ್ಕೆ ಸವಾಲಾದ ಯೋಗಶಕ್ತಿಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೆ, ವೈದ್ಯಕೀಯ ಮತ್ತು ವಿಜ್ಞಾನ ಲೋಕಕ್ಕೂ ಈ ಘಟನೆ ಬೆರಗು ಮೂಡಿಸಿದೆ.
ಇಷ್ಟು ಸುದೀರ್ಘ ದಿನಗಳ ಕಾಲ ಯಾವುದೇ ಬಾಹ್ಯ ಸಂಪರ್ಕ, ಗಾಳಿ ಮತ್ತು ಆಹಾರವಿಲ್ಲದೆ ಒಬ್ಬ ವ್ಯಕ್ತಿ ಜೀವಂತವಾಗಿ, ಆರೋಗ್ಯವಾಗಿ ಇರಲು ಹೇಗೆ ಸಾಧ್ಯ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ
. ಭಾರತದ ಪ್ರಾಚೀನ ಋಷಿಮುನಿಗಳ ಯೋಗ ಪರಂಪರೆ ಇಂದಿಗೂ ಸಜೀವವಾಗಿದೆ ಎಂಬುದಕ್ಕೆ ಅಂತೂರ ಬೆಂತೂರ ಗ್ರಾಮದಲ್ಲಿ ನಡೆದ ಈ ಶಿವಯೋಗ ಸಮಾಧಿಯೇ ಸಾಕ್ಷಿಯಾಗಿದೆ
ಎಂದು ಸ್ಥಳೀಯ ಹಿರಿಯರು ಶ್ಲಾಘಿಸಿದ್ದಾರೆ.
ವರದಿ: ನಾಗೋಸ ಸಿದ್ಲಿಂಗ ಬೆಟಗೇರಿ(ವಿಶೇಷ ವರದಿಗಾರರು, ಗದಗ)
