ತುಮಕೂರು: ಪ್ರೀತಿಯ ನಿರಾಕರಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಬಾಡಿಗೆ ಕಾರಿನಲ್ಲಿ ಬೆಂಗಳೂರಿನಿಂದ ಉತ್ತರ ಕನ್ನಡದ ಅಂಕೋಲಕ್ಕೆ ತೆರಳುತ್ತಿದ್ದ ವೇಳೆ ಪ್ರೇಮಿಗಳ ನಡುವೆ ಜಗಳ ಭುಗಿಲೆದ್ದಿದ್ದು, ಪ್ರೇಯಸಿಗೆ ಚಾಕುವಿನಿಂದ ಇರಿದು, ಬಳಿಕ ಕಾರಿನೊಳಗೆ ತಾನೇ ತಂದಿದ್ದ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಘಟನೆಯಲ್ಲಿ ಬೆಂಗಳೂರಿನ ನಾಗೇಂದ್ರ (30) ಎಂಬಾತ ಕಾರಿನಲ್ಲೇ ಸುಟ್ಟು ಕರಕಲಾಗಿದ್ದು, ಆತನೊಂದಿಗಿದ್ದ ರಮ್ಯಾ ಉಲ್ಲಾಸ್ (23) ಎಂಬ ಯುವತಿ ತೀವ್ರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ದೀರ್ಘಾವಧಿ ಪ್ರೀತಿ, ಕೊನೆಯಲ್ಲಿ ವೈಷಮ್ಯ:ಮೂಲಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ರಮ್ಯಾ ಉಲ್ಲಾಸ್ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಒಟಿ ಟೆಕ್ನಿಷಿಯನ್ (OT Technician) ಆಗಿ ಕೆಲಸ ಮಾಡುತ್ತಿದ್ದರು.
ಮೃತ ನಾಗೇಂದ್ರ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಇವರಿಬ್ಬರು ಕಳೆದ ಏಳೆಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಇವರ ನಡುವೆ ಯಾವುದೋ ವೈಯಕ್ತಿಕ ವಿಚಾರಕ್ಕೆ ಬಿರುಕು ಮೂಡಿತ್ತು. ಸ್ವಗ್ರಾಮಕ್ಕೆ ಹೋಗಲು ಇಬ್ಬರೂ ಸೇರಿ ಖಾಸಗಿ ಕ್ಯಾಬ್ ಒಂದನ್ನು ಬುಕ್ ಮಾಡಿಕೊಂಡು ಬೆಂಗಳೂರಿನಿಂದ ಹೊರಟಿದ್ದರು.ಚಲಿಸುವ ಕಾರಿನಿಂದ ಜಿಗಿದ ಯುವತಿ:ಕಾರು ತುಮಕೂರು ದಾಟುತ್ತಿದ್ದಂತೆ ನಾಗೇಂದ್ರ ಹಾಗೂ ರಮ್ಯಾ ನಡುವೆ ಕಾರಿನಲ್ಲೇ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ.
ಜಗಳ ವಿಕೋಪಕ್ಕೆ ಹೋದಾಗ, ನಾಗೇಂದ್ರ ತಾನು ಮೊದಲೇ ಪ್ಲಾನ್ ಮಾಡಿ ತಂದಿದ್ದ ಚಾಕುವಿನಿಂದ ರಮ್ಯಾ ಅವರ ತಲೆ ಹಾಗೂ ದೇಹದ ಭಾಗಕ್ಕೆ ಮನಸೋಇಚ್ಛೆ ಚುಚ್ಚಿದ್ದಾನೆ. ಇದೇ ವೇಳೆ ಆತನ ಬಳಿ ಪೆಟ್ರೋಲ್ ಬಾಂಬ್ ಇರುವುದು ಯುವತಿಯ ಗಮನಕ್ಕೆ ಬಂದಿದೆ. ನಾಗೇಂದ್ರನ ಈ ರೌದ್ರಾವತಾರದಿಂದ ಬೆಚ್ಚಿಬಿದ್ದ ರಮ್ಯಾ, ಜೀವ ಉಳಿಸಿಕೊಳ್ಳಲು ಚಲಿಸುತ್ತಿದ್ದ ಕಾರಿನಿಂದಲೇ ಹೊರಗೆ ಹಾರಿದ್ದಾರೆ.
ಡೋರ್ ಲಾಕ್ ಮಾಡಿ ಪೆಟ್ರೋಲ್ ಬಾಂಬ್ ಸ್ಫೋಟ:ಕಾರಿನೊಳಗೆ ನಡೆಯುತ್ತಿದ್ದ ಈ ಭೀಕರ ದೃಶ್ಯ ಹಾಗೂ ಯುವತಿ ಕೆಳಗೆ ಬಿದ್ದಿದ್ದನ್ನು ಕಂಡು ಗಾಬರಿಗೊಂಡ ವಾಹನ ಚಾಲಕ ತಕ್ಷಣವೇ ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಕೆಳಗಿಳಿದಿದ್ದಾನೆ. ಇದೇ ಸಮಯವನ್ನು ಬಳಸಿಕೊಂಡ ನಾಗೇಂದ್ರ ಒಳಗಿನಿಂದ ಕಾರಿನ ಎಲ್ಲಾ ಡೋರ್ಗಳನ್ನು ಸೆಂಟ್ರಲ್ ಲಾಕ್ ಮಾಡಿಕೊಂಡಿದ್ದಾನೆ. ತಾನು ಮೊದಲೇ ಸಿದ್ಧಪಡಿಸಿಕೊಂಡು ತಂದಿದ್ದ ‘ಪೆಟ್ರೋಲ್ ಬಾಂಬ್’ ಅನ್ನು ಕಾರಿನೊಳಗೆ ಸಿಡಿಸಿದ್ದಾನೆ.
ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ನಾಗೇಂದ್ರ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ.
ಸ್ಥಳಕ್ಕೆ ಎಸ್ಪಿ ಭೇಟಿ, ತನಿಖೆ ಚುರುಕು:ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಅವರು ಉನ್ನತ ಅಧಿಕಾರಿಗಳ ತಂಡದೊಂದಿಗೆ ಜೋಗಿಹಳ್ಳಿ ಬಳಿಯ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇತ್ತ ಕಾರಿನಿಂದ ಜಿಗಿದು ತೀವ್ರ ರಕ್ತಸ್ರಾವ ಹಾಗೂ ಗಾಯಗಳಾಗಿದ್ದ ರಮ್ಯಾ ಉಲ್ಲಾಸ್ ಅವರನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಅವರಿಗೆ ತುರ್ತು ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಈ ಭೀಕರ ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
, ಪೊಲೀಸರು ಸುಟ್ಟು ಹೋದ ಕಾರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
